ಕೂಡಿಗೆ, ಮಾ. 19 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸವವು ದೇವಾಲಯದ ಆವರಣದಲ್ಲಿ ನಡೆಯಿತು.
ಇದರ ಅಂಗವಾಗಿ ಬೈಲುಕುಪ್ಪೆಯ ಪಂಡಿತ್ ಗಣಪತಿಯವರ ನೇತೃತ್ವದಲ್ಲಿ ಬೆಳಗ್ಗಿನಿಂದಲೇ ಮಹಾಗಣಪತಿ ಹೋಮ, ದುರ್ಗಾಹೋಮ ಸೇರಿದಂತೆ ದೇವಿಗೆ ವಿವಿಧ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನಡೆದವು.
ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲೇನಹಳ್ಳಿ, ಮದಲಾಪುರ, ಕೂಡಿಗೆ, ಸೀಗೆಹೊಸೂರು ಗ್ರಾಮಗಳ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ಮಹಾಮಂಗಳಾರತಿಯ ನಂತರ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಿತು. ಸಂಜೆ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಸಿ. ರವಿ, ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಸಮಿತಿಯ ನಿರ್ದೇಶಕರುಗಳಾದ ವಕೀಲ ಶಿವಮೂರ್ತಿ, ಅರುಣ್, ರಾಜು, ಪ್ರಸನ್ನ, ರಘು ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.