ಮಡಿಕೇರಿ, ಮಾ. 19: ಕೊಡಗು ಮೂಲದ ಐ.ಎ.ಎಸ್. ಅಧಿಕಾರಿಯೊಬ್ಬರು ಇದೀಗ ಚಾಮರಾಜನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಸಿ.ಇ.ಓ. ಆಗಿದ್ದ ಕೊಡಗಿನ ಬೊಳಂದಂಡ ಕಾವೇರಿ (ತಾಮನೆ ಬಲ್ಲಟಿಕಾಳಂಡ) ಅವರನ್ನು ಸರಕಾರ ಇತ್ತೀಚೆಗೆ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ್ದು, ಚಾಮರಾಜನಗರ ಜಿಲ್ಲೆಗೆ ನಿಯೋಜಿಸಲಾಗಿದೆ. ಕಾವೇರಿ ಅವರು ತಾ. 12 ರಂದು ಅಧಿಕಾರ ವಹಿಸಿ ಕೊಂಡಿದ್ದಾರೆ.

ಕಾರುಗುಂದ ಗ್ರಾಮದ ಬಲ್ಲಟಿ ಕಾಳಂಡ ಬೆಳ್ಯಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರಿ ಯಾಗಿರುವ ಕಾವೇರಿ ಅವರು, ಈ ಹಿಂದೆ ಕೆ.ಎ.ಎಸ್. ಅಧಿಕಾರಿಯಾಗಿ ವಿವಿಧೆಡೆ ಕರ್ತವ್ಯ ನಿರ್ವಹಿಸುವದರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರಾಗಿ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಪಂಚಾಯಿತಿಗಳಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

2008 ರಲ್ಲಿ ಐ.ಎ.ಎಸ್. ತಂಡದ ಸಾಧನೆಯೊಂದಿಗೆ ಪ್ರಸಕ್ತ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾವೇರಿ ಅವರ ಪತಿ ಬೆಂಗಳೂರಿನ ಯು.ಟಿ.ಸಿ.ಯಲ್ಲಿ ಉದ್ಯೋಗಿಯಾಗಿದ್ದಾರೆ. ಪತಿ ಬೊಳಂದಂಡ ಮುತ್ತಣ್ಣ ಹಾಗೂ ಇವರ ಇಬ್ಬರು ಪುತ್ರರಾದ ಪ್ರತೀಕ್ ಕುಶಾಲಪ್ಪ, ದಿಶಾನ್ ಕುಶಾಲಪ್ಪ ವಿದ್ಯಾರ್ಥಿಗಳಾಗಿದ್ದಾರೆ. ಸರಕಾರ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಜನತೆಯ ಆಶಯದಂತೆ ಕಾನೂನಿನ ಚೌಕಟ್ಟಿನಲ್ಲಿ ಹೊಣೆಗಾರಿಕೆ ನಿಭಾಯಿಸುವ ಆಶಯವನ್ನು ಅವರು ‘ಶಕ್ತಿ’ಯೊಂದಿಗೆ ವ್ಯಕ್ತಪಡಿಸಿದ್ದಾರೆ.