ಚೆಟ್ಟಳ್ಳಿ, ಮಾ. 19 : ರಾಜ್ಯ ಸರಕಾರ ಅರಣ್ಯ ಇಲಾಖೆಯ ವಿವಿಧ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈಯ್ಯುತ್ತಿರುವ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಸೇರಿದಂತೆ 25 ಮಂದಿಗೆ ಮುಖ್ಯಮಂತ್ರಿಗಳ ಪದಕ ಘೋಷಿಸಿದ್ದು, ಕೊಡಗಿನಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಕನ್ನಂಡ ಪಿ. ರಂಜನ್ ಹಾಗೂ ಕಳ್ಳೀರ ದೇವಯ್ಯ ಅವರುಗಳು ಆಯ್ಕೆಯಾಗಿದ್ದಾರೆ.ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂರಕ್ಷಣೆ, ಅರಣ್ಯ ಕೃಷಿ, ಅರಣ್ಯ ನಿರ್ವಹಣೆ ತರಬೇತಿ, ಸಂಶೋಧನೆ, ಕಾರ್ಯಯೋಜನೆ, ಜನರ ಪಾಲ್ಗೊಳ್ಳುವಿಕೆ, ವನ್ಯಜೀವಿ ಅಪರಾಧಗಳ ತಡೆ ಕಾರ್ಯಾಚರಣೆ, ಅರಣ್ಯಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಶೌರ್ಯ, ದಿಟ್ಟತನ ತೋರಿದ ಹಾಗೂ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ರಾಜ್ಯದ 25 ಅರಣ್ಯ ಸಿಬ್ಬಂದಿಗಳ ಪೈಕಿ ಮಡಿಕೇರಿ ವಿಭಾಗದಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ಸಾಧನೆಗೈದ ಕನ್ನಂಡ ಪಿ.ರಂಜನ್ ಹಾಗೂ ವೀರಾಜಪೇಟೆ ವಿಭಾಗದಲ್ಲಿ ಕಳ್ಳೀರ ದೇವಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪ್ರಧಾನ ಮಾಡಲಾಗುವದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.