ಮಡಿಕೇರಿ, ಮಾ. 16: ಕೊಡಗು ಜಿಲ್ಲೆಯಲ್ಲಿ ಕುಡಿದು ವಾಹನಗಳನ್ನು ಚಾಲಿಸುವದು, ಸಂಚಾರಿ ನಿಯಮಗಳನ್ನು ಪಾಲಿಸದಿರುವದು, ದ್ವಿಚಕ್ರ ಸವಾರರು ಶಿರವಸ್ತ್ರ ಧರಿಸದಿರುವದು, ಅನುಮತಿ ಪತ್ರ ಇಲ್ಲದೆ ವಯೋಮಿತಿಗೆ ಮುನ್ನ ಚಾಲನೆ ಮುಂತಾದ ವೇಳೆ ಅವಘಡಗಳು ಎದುರಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಕೊಡಗಿನಲ್ಲಿ ಪದೇ ಪದೇ ಸಂಭವಿಸುತ್ತಿರುವ ವಾಹನ ಅವಘಡಗಳ ಕುರಿತು ‘ಶಕ್ತಿ’ಯೊಂದಿಗೆ ಮಾತ ನಾಡುತ್ತಿದ್ದ ಅವರು, ಕಳೆದ ಮೂರು ವರ್ಷಗಳಲ್ಲಿ ಈ ಪುಟ್ಟ ಜಿಲ್ಲೆಯಲ್ಲಿ ಸಂಭವಿಸಿರುವ ಅವಘಡಗಳ ಅಂಕಿಅಂಶ ನೀಡುತ್ತಾ, ಪ್ರತಿಯೊಬ್ಬರು ವಾಹನ ಚಾಲಿಸುವಾಗ ತಮ್ಮ ಹೆತ್ತವರು, ಮಡದಿ, ಮಕ್ಕಳು ಅಥವಾ ಕುಟುಂಬದ ಅವಲಂಭಿತ ಜೀವಗಳೊಂದಿಗೆ ತಮ್ಮ ಪ್ರಾಣ ಅಮೂಲ್ಯವಾದದ್ದೆಂದು ನೆನಪಿಡುವಂತೆ ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ 2014 ರಲ್ಲಿ ಒಟ್ಟು 368 ವಾಹನ ಅವಘಡಗಳು ಚಾಲಕರ ನಿರ್ಲಕ್ಷ್ಯದಿಂದ ಸಂಭವಿಸಿದ್ದು, 93 ದ್ವಿಚಕ್ರ, 30 ಮೂರು ಚಕ್ರ, 193 ನಾಲ್ಕು ಚಕ್ರ, 52 ಭಾರೀ ವಾಹನ (ಬಸ್, ಲಾರಿ ಇತ್ಯಾದಿ) ಈ ಪಟ್ಟಿಯಲ್ಲಿವೆ ಎಂದು ಅಂಕಿಅಂಶ ನೀಡಿದ್ದಾರೆ. ಈ ವರ್ಷ 51 ಸ್ವಯಂ ಅವಘಡಗಳು, 79 ಪಾದಚಾರಿಗಳಿಗೆ ಡಿಕ್ಕಿ, 125 ಸವಾರರು, 67 ಹಿಂಬದಿ ಸವಾರರು ಅಪಘಾತಕ್ಕೊಳಗಾಗಿದ್ದಾರೆ ಎಂದರು. ಆಟೋ ರಿಕ್ಷಾಗಳಂಥ ವಾಹನಗಳ 15 ಅವಘಡಗಳೊಂದಿಗೆ 27 ಪ್ರಯಾ ಣಿಕರು ತೊಂದರೆ ಅನುಭವಿಸಿದ್ದು, ನಾಲ್ಕು ಚಕ್ರ ವಾಹನಗಳಲ್ಲಿ 34 ಮಂದಿ ಚಾಲಕರ ಸಹಿತ 61 ಮಂದಿ ಪ್ರಯಾಣಿಕರು ನೋವು ಅನುಭವಿಸುವಂತಾಗಿದೆ. ಬಸ್, ಲಾರಿ ಇತ್ಯಾದಿ 11 ಚಾಲಕರು ಮತ್ತು 38 ಪ್ರಯಾಣಿಕರ ಸಹಿತ 508 ಮಂದಿ ಅವಘಡದಲ್ಲಿ ಸಿಲುಕಿದ್ದಾಗಿ ವಿವರಿಸಿದ್ದಾರೆ.
2015: ಅದೇ ರೀತಿ 2015 ರಲ್ಲಿ 113 ದ್ವಿಚಕ್ರ, 34 ಮೂರು ಚಕ್ರ, 211 ನಾಲ್ಕು ಚಕ್ರ ವಾಹನಗಳ ಸಹಿತ ಬಸ್, ಲಾರಿ ಇತ್ಯಾದಿ 90 ವಾಹನಗಳು ಸೇರಿದಂತೆ 448 ಅವಘಡಗಳು ಎದುರಾಗಿವೆ. ಈ ಸಾಲಿನಲ್ಲಿ 82 ಸ್ವಯಂ ಅವಘಡ, 90 ಪಾದಚಾರಿಗಳಿಗೆ ಡಿಕ್ಕಿ, 12 ಬೈಸಿಕಲ್, 135 ದ್ವಿಚಕ್ರ ಸವಾರರು, 86 ಹಿಂಬದಿ ಸವಾರರು, 18 ಮೂರು ಚಕ್ರ ವಾಹನ ಚಾಲಕರು ಹಾಗೂ 40 ಸಹ ಪ್ರಯಾಣಿಕರು ಅವಘಡದಲ್ಲಿ ಸಿಲುಕಿದ್ದಾರೆ. ನಾಲ್ಕು ಚಕ್ರ ವಾಹನಗಳಲ್ಲಿ 61 ಚಾಲಕರು ಹಾಗೂ 116 ಸಹ ಪ್ರಯಾಣಿಕರು ಸೇರಿದಂತೆ ಬಸ್, ಲಾರಿ ಇತ್ಯಾದಿಗಳ 7 ಚಾಲಕರು ಹಾಗೂ 38 ಸಹ ಪ್ರಯಾಣಿಕರ ಸಹಿತ 685 ಮಂದಿ ಅವಘಡ ಅನುಭವಿಸಿದ್ದಾರೆ.
2016: ಇನ್ನು 2016ನೇ ಸಾಲಿನಲ್ಲಿ 111 ದ್ವಿಚಕ್ರ, 29 ಮೂರು ಚಕ್ರ, 219 ನಾಲ್ಕು ಚಕ್ರ ಸಹಿತ 75 ಬಸ್, ಲಾರಿ ಇತ್ಯಾದಿ ಸೇರಿ 434 ವಾಹನ ಅವಘಡಗಳು ಸಂಭವಿಸಿವೆ. ಈ ಪೈಕಿ 49 ಸ್ವಯಂ, 71 ಪಾದಚಾರಿ ಡಿಕ್ಕಿ ಪ್ರಕರಣ, 26 ಬೈಸಿಕಲ್, 130 ದ್ವಿಚಕ್ರ ಹಾಗೂ 82 ಹಿಂಬದಿ ಸವಾರರು, 16 ದ್ವಿಚಕ್ರ, 40 ಸಹ ಪ್ರಯಾಣಿಕರು, 63 ನಾಲ್ಕು ಚಕ್ರ, 209 ಸಹ ಪ್ರಯಾಣಿಕರು, 14 ಬಸ್, ಲಾರಿ ಇತ್ಯಾದಿ ಸೇರಿದಂತೆ 40 ಸಹ ಪ್ರಯಾಣಿಕರ ಸಹಿತ ಒಟ್ಟು 740 ಮಂದಿ ಗಾಯಗೊಂಡಿದ್ದಾಗಿದೆ.
2017: ಕಳೆದ ವರ್ಷ ಜಿಲ್ಲೆಯಲ್ಲಿ 53 ದ್ವಿಚಕ್ರ, 9 ಮೂರು ಚಕ್ರ, 88 ನಾಲ್ಕು ಚಕ್ರ, 25 ಬಸ್, ಲಾರಿ ಮುಂತಾದ ಅವಘಡಗಳೊಂದಿಗೆ 175 ವಾಹನಗಳು ಹಾನಿಗೊಂಡಿವೆ. ಇನ್ನು ರಸ್ತೆ ಅಪಘಾತದಲ್ಲಿ ಈ ಸಾಲಿನಲ್ಲಿ ಸ್ವಯಂ 9, ಪಾದಚಾರಿಗಳು 33, ಬೈಸಿಕಲ್ 11, ದ್ವಿಚಕ್ರ ವಾಹನಗಳು 56, ಹಿಂಬದಿ ಸವಾರರು 44, ಮೂರು ಚಕ್ರದ 5, ಸಹ ಪ್ರಯಾಣಿಕರು 21, ನಾಲ್ಕು ಚಕ್ರ ವಾಹನ ಚಾಲಕರು 28, ಸಹ ಪ್ರಯಾಣಿಕರು 80 ಸೇರಿದಂತೆ ಬಸ್, ಲಾರಿ, ಟ್ರಕ್ ಇತ್ಯಾದಿ 5 ಮತ್ತು 52 ಸಹ ಪ್ರಯಾಣಿಕರು ಒಳಗೊಂಡಂತೆ 344 ಮಂದಿ ಗಾಯಗೊಂಡಿದ್ದಾರೆ.
ಸಾವು - ನೋವು: ಜಿಲ್ಲೆಯಲ್ಲಿ ಇಷ್ಟೆಲ್ಲ ಅವಘಡಗಳ ನಡುವೆ 2014 ರಲ್ಲಿ 452 ರಸ್ತೆ ಅಪಘಾತದೊಂದಿಗೆ 61 ಸಾವಿನ ಘಟನೆ ಸಂಭವಿಸಿದೆ. 2015 ರಲ್ಲಿ 535 ಗಾಯ, 85 ಸಾವು, 2016 ರಲ್ಲಿ 512 ಗಾಯ 98 ಸಾವು, 2017 ರಲ್ಲಿ 175 ಗಾಯ ಪ್ರಕರಣ ಹಾಗೂ 29 ಸಾವು - ನೋವು ಎದುರಾಗಿದೆ ಎಂದು ಅಂಕಿಅಂಶ ಲಭಿಸಿದೆ.