ಮಡಿಕೇರಿ, ಮಾ. 17: ತಾ. 18 ರಂದು (ಇಂದು) ಸೇರಿಂದತೆ ಜಿಲ್ಲೆಯ ವಿವಿಧೆಡೆ ದೇವತಾ ಕಾರ್ಯಕ್ರಮಗಳು ಜರುಗಲಿವೆ. ವಿವರ ಈ ಕೆಳಗಿನಂತಿವೆ.

ವಿಜಯ ವಿನಾಯಕ ದೇವಾಲಯದಲ್ಲಿಂದು ಬೇವು-ಬೆಲ್ಲ

ಮಡಿಕೇರಿ ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಯುಗಾದಿ ಪ್ರಯುಕ್ತ ತಾ. 18 ರಂದು (ಇಂದು) ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.

ವಿಶೇಷ ಅಲಂಕಾರ, ಭಕ್ತಾದಿಗಳಿಗೆ ಬೇವು-ಬೆಲ್ಲ ವಿತರಣೆಯೊಂದಿಗೆ ಸಿಹಿಬೂಂದಿಯ ಪ್ರಸಾದವನ್ನು ನೀಡಲಾಗುವದು. ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 5 ರಿಂದ ರಾತ್ರಿ 8ರ ವರೆಗೂ ದೇವಾಲಯದಲ್ಲಿ ಈ ವ್ಯವಸ್ಥೆ ಇದೆಯೆಂದು ಆಡಳಿತ ಮಂಡಳಿ ತಿಳಿಸಿದೆ.

ಮಹಾದೇವ ಮಹೋತ್ಸವ

ಗೋಣಿಕೊಪ್ಪಲು: ಕೋತೂರು ಶ್ರೀ ಮಾರಮ್ಮ ದೇವಸ್ಥಾನ ಸಮಿತಿಯ ಉಸ್ತುವಾರಿಯಲ್ಲಿ ಸುಮಾರು ರೂ.1 ಕೋಟಿ ವೆಚ್ಚದ ಕೋತೂರು ಶ್ರೀ ಮಹಾದೇವ, ಗಣಪತಿ ಹಾಗೂ ಬಸವೇಶ್ವರ ದೇಗುಲದ ಪ್ರತಿಷ್ಠಾಪನಾ ಮಹೋತ್ಸವ ತಾ. 19 ರಂದು ಜರುಗಲಿರುವದಾಗಿ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಬೋಪಣ್ಣ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾ. 14 ರಿಂದಲೇ ಕೇರಳದ ತಂತ್ರಿ ಶ್ರೀಶಂಕರನ್ ನಾಯರ್ ಸ್ವಾಗತದೊಂದಿಗೆ ಶುದ್ಧತಾ ಕಾರ್ಯ, ಮೊಳೆ ಪೂಜೆ ಆರಂಭಗೊಂಡಿದೆ.

ತಾ. 18 ರಂದು (ಇಂದು) ಯುಗಾದಿ ದಿನ ಸಂಹಾರ ತತ್ವಹೋಮ, ಶ್ರೇಯ ಪೂಜೆ, ಪ್ರಾಣಿ ಸಂಹಾರ ತತ್ವ, ಕಳಶ ಹೋಮ, ಜೀವಲು ದಾಸನ ಪೂಜೆ, ಉದ್ದಾಸನ ಪೂಜೆ ಇತ್ಯಾದಿ ನಡೆಯಲಿದೆ.

ತಾ. 19 ರಂದು ಬೆಳಿಗ್ಗೆ 9.50 ರಿಂದ 11.56ರವರೆಗೆ ದೇವರ ಪ್ರತಿಷ್ಠಾಪನೆ, ಬಲಿಕಲ್ಲು ಪ್ರತಿಷ್ಠೆ, ಬೃಹ್ಮ ಕಲಸ, ಪ್ರತಿಷ್ಠೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 1.30 ರಿಂದ ಸಾಮೂಹಿಕ ಅನ್ನಸಂತರ್ಪಣೆ.

ಈಗಾಗಲೇ ದೇವಸ್ಥಾನದ ಜೀರ್ಣೋದ್ಢಾರ ಕಾರ್ಯಕ್ಕೆ ಮುಜರಾಯಿ ಇಲಾಖೆಯಿಂದ ರೂ.14 ಲಕ್ಷ ಹಾಗೂ ದೇವಸ್ಥಾನ ಆವರಣ ಗೋಡೆ ನಿರ್ಮಾಣಕ್ಕೆ ಪ್ರತಾಪ್ ಸಿಂಹ ಅವರ ಸಂಸದರ ನಿಧಿಯಿಂದ ರೂ.5 ಲಕ್ಷ, ಮೈಸೂರಿನ ದಾನಿಯೊಬ್ಬರು ರೂ.3 ಲಕ್ಷ ಹಾಗೂ ಗ್ರಾಮ ಮತ್ತು ಇತರೆ ದಾನಿಗಳು ನೀಡಿದ ವಂತಿಗೆಯೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ ಎಂದರು. ಧರ್ಮಸ್ಥಳ ಧರ್ಮಾಧಿಕಾರಿಗಳು ರೂ.50 ಸಾವಿರ ಹಾಗೂ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು ಸುಮಾರು ರೂ.1.50 ಲಕ್ಷ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ತಾ. 19 ರಂದು ನಡೆಯುವ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕೊಡಗು ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ಮತ್ತಿತರರು ಭಾಗವಹಿಸುವದಾಗಿ ತಿಳಿಸಿದ್ದಾರೆ.

ಯುಗಾದಿ ವಿಶೇಷ ಪೂಜೆ

ಮಡಿಕೇರಿ: ನಗರದ ಸುದರ್ಶನ ಬಡಾವಬಣೆಯಲ್ಲಿರುವ ಶ್ರೀ ಮುನೀಶ್ವರ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ತಾ. 18 ಮತ್ತು 19 ರಂದು ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ಪತ್ರಿಕಾ ಹೇಳಿಕೆ ನೀಡಿರುವ ದೇವಾಲಯ ಸಮಿತಿಯ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ, ಎರಡು ದಿನಗಳ ಕಾಲ ವಿಶೇಷ ಪೂಜೆ ಹಾಗೂ ವಿವಿಧ ಆಟೋಟದ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ತಾ. 18 ರಂದು ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮತ್ತು ಅನ್ನದಾನ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ವಿವಿಧ ಆಟೋಟ ಸ್ಪರ್ಧೆಗಳು, ಸಂಜೆ 6.30 ರಿಂದ ಭಜನೆ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9 ಗಂಟೆಗೆ ವಿಶೇಷ ಪೂಜೆಯೊಂದಿಗೆ ಪ್ರಸಾದ ವಿನಿಯೋಗವಾಗಲಿದೆ.

ತಾ. 19 ರಂದು ಬೆಳಿಗ್ಗೆ 5 ಗಂಟೆಯಿಂದ 9 ಗಂಟೆಯವರೆಗೆ ಹರಕೆ ಒಪ್ಪಿಸುವದು, ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಪೂಜೆ, ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಅನ್ನಸಂತರ್ಪಣೆ, ಮಧ್ಯಾಹ್ನ 3 ಗಂಟೆಯಿಂದ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ.

ತಾ. 20 ರಿಂದ ಮುತ್ತಪ್ಪ ತೆರೆ

ವೀರಾಜಪೇಟೆ: ಮೀನುಪೇಟೆಯ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ 74ನೇ ವರ್ಷದ ಮುತ್ತಪ್ಪ ತೆರೆ ಮಹೋತ್ಸವವನ್ನು ತಾ. 20 ರಿಂದ 22 ರವರೆಗೆ ಆಚರಿಸಲು ಪೂರ್ವ ಸಿದ್ಧತೆಗಳು ನಡೆದಿವೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಇ.ಸಿ. ಜೀವನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 20 ರಂದು ಪ್ರಾತಃಕಾಲ 5 ಗಂಟೆಗೆ ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 5 ಗಂಟೆಗೆ ಮುತ್ತಪ್ಪ ವೆಳ್ಳಾಟಂ, ರಾತ್ರಿ ಇಲ್ಲಿನ ಪ್ರಸಿದ್ಧ ವಾದ್ಯ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ರಾಜನ್ ಪುಷ್ಪ ಮಾತನಾಡಿ, ತಾ. 21 ರಂದು ಸಂಜೆ 5 ಗಂಟೆಗೆ ಸುಂಕದ ಕಟ್ಟೆಯಿಂದ ಮೊದಲ ಕಲಶದ ಮೆರವಣಿಗೆಯೊಂದಿಗೆ ವಿಶೇಷ ತಾಲಪೋಲಿ ವಾದ್ಯಘೋಷದೊಂದಿಗೆ ದೇವಾಲಯಕ್ಕೆ ಆಗಮಿಸುವದು. 6 ಗಂಟೆಗೆ ಮುತ್ತಪ್ಪ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೊದಿ ವಿಷ್ಣುಮೂರ್ತಿ ವೆಳ್ಳಾಟಂ ರಾತ್ರಿ 8 ಗಂಟೆಗೆ ಅನ್ನದಾನ ಕಾರ್ಯಕ್ರಮವಿದೆ. ತಾ. 22 ರಂದು ಪ್ರಾತಃಕಾಲ 1 ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, ಪ್ರಾತಃಕಾಲ 4 ಗಂಟೆಗೆ ತಿರುವಪ್ಪನ್, 8 ಗಂಟೆಗೆ ಭಗವತಿ ಪೋದಿ, 10 ಗಂಟೆಗೆ ವಸೂರಿಮಾಲ, 11 ಗಂಟೆಗೆ ವಿಷ್ಣುಮೂರ್ತಿ ಕೋಲ, 3 ಗಂಟೆಗೆ ವಿಷ್ಣುಮೂರ್ತಿ ಕೋಲದೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು. ಸಹ ಕಾರ್ಯದರ್ಶಿ ಸಜೀವನ್ ಇದ್ದರು.

ಭಗಂಡೇಶ್ವರ ದೇವಾಲಯದಲ್ಲಿ ಪೂಜೆ

ಮಡಿಕೇರಿ: ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಾ. 18 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ಮಹಾ ಗಣಪತಿ ಪೂಜೆ, ಶ್ರೀ ಭಗಂಡೆಶ್ವರ, ಮಹಾವಿಷ್ಣು ಹಾಗೂ ಸುಬ್ರಮಣ್ಯ ದೇವರಿಗೆ ವಿಶೇಷ ಪೂಜೆ ಮತ್ತು ಮಧ್ಯಾಹ್ನ 12.30 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಪೂಜಾ ಕಾರ್ಯಗಳು ನಡೆಯಲಿವೆ. ಜೀವನದಿ ತಲಕಾವೇರಿಯಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಮಹಾ ಗಣಪತಿ ಪೂಜೆ, ಶ್ರೀ ಅಗಸ್ತ್ಯೆಶ್ವರ ಸನ್ನಿಧಿಯಲ್ಲಿ ಸಹಸ್ರ ನಾಮಾರ್ಚನೆ ಮತ್ತು ಮಧ್ಯಾಹ್ನ 12 ಗಂಟೆಗೆ ಮಹಾ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್. ತಮ್ಮಯ್ಯ ತಿಳಿಸಿದ್ದಾರೆ.