ಕೂಡಿಗೆ, ಮಾ. 17: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸುರಿದ ಬಾರಿ ಮಳೆಗೆ ಕೂಡಿಗೆ-ಕೋವರ್‍ಕೊಲ್ಲಿ ಮಾರ್ಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಸಂದರ್ಭ ಬದಲಿ ರಸ್ತೆ ವ್ಯವಸ್ಥೆ ಮಾಡಿದ್ದ ಮದಾಲಪುರ ಸಮೀಪದ ರಸ್ತೆ ಕುಸಿತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುತ್ತಿವೆ.
ಕೋವರ್‍ಕೊಲ್ಲಿ-ಕೂಡಿಗೆ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ನಡೆಯುವ ಸಂದರ್ಭ ಮದಾಲಪುರ ಸಮೀಪದ ಮಾಸ್ತಹಳ್ಳಕ್ಕೆ ಅಡ್ಡಲಾಗಿ ಚಿಕ್ಕದಾಗಿ ಸೇತುವೆ ನಿರ್ಮಾಣ ಮಾಡುವ ಕಾಮಗಾರಿ ಆಗುತ್ತಿದ್ದು, ಪಕ್ಕದಲ್ಲೇ ಬದಲೀ ರಸ್ತೆಯನ್ನು ನಿರ್ಮಾಣ ಮಾಡಿ ಕಳೆದ ಒಂದು ವಾರದಿಂದ ವಾಹನ ಚಾಲನೆಗೆ ಅವಕಾಶ ಮಾಡಿಕೊಡಲಾಗಿತ್ತು. ಮಳೆ ಬಿದ್ದ ಪರಿಣಾಮ ನೀರಿನ ಸೆಳೆತದಿಂದ ರಸ್ತೆ ಕುಸಿದಿದ್ದು, ಇದೀಗ ಸೋಮವಾರಪೇಟೆ-ಕುಶಾಲನಗರ ಮಾರ್ಗವಾಗಿ ಚಲಿಸುವ ವಾಹನಗಳಿಗೆ ಮಲ್ಲೇನಹಳ್ಳಿ ಸಮೀಪದಲ್ಲಿರುವ ಹಾರಂಗಿ ನಾಲೆಯ ರಸ್ತೆಯ ಮೂಲಕ ಮದಲಾಪುರ ರಸ್ತೆಗೆ ಸೇರುವ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸುವ ಪ್ರಸಂಗ ಎದುರಾಗಿದೆ.