ಕೂರಲಾಗುವದಿಲ್ಲ, ಹೊರಳಲಾಗುವದಿಲ್ಲ, ಕಣ್ಣು ಕಾಣುವದಿಲ್ಲ, ಆಹಾರ ಒಳ ಸೇರುವದಿಲ್ಲ, ನೋವು ಸಹಿಸಲಾಗುವದಿಲ್ಲ, ಕೀರಲು ದನಿಯ ಆಕ್ರಂದನಕ್ಕೆ ಕಿವಿಗೊಡುವವರಿರುವದಿಲ್ಲ. ನಾಲ್ಕು ಗೋಡೆಗಳ ನಡುವಿನ ಅವರ ಕೂಗು ಕೇಳುವವರಿಲ್ಲ.

ಇಂತಹ ನತದೃಷ್ಟರು ಅದೆಷ್ಟು ಕುಟುಂಬಗಳಲ್ಲಿ ಇಲ್ಲ? ದೇಶೀಯ ಔಷಧಿ, ವಿದೇಶೀ ಔಷಧಿ, ಆಯುರ್ವೇದ, ಯುನಾನಿ, ಹೋಮಿಯೋಪತಿ ಔಷಧಿ, ಕೊನೆಗೆ ಸಿಕ್ಕ ದೇವರುಗಳಿಗೆ ಹರಕೆ, ತಾೈತ ಏನು ಮಾಡಿದರೂ ಕಣ್ಣು ಮಿಟುಕಿಸದೆ, ಜೀವಚ್ಛವಗಳಂತೆ ಸಾವಿಗಾಗಿ ಮಾತ್ರ ಪ್ರಾರ್ಥಿಸುತ್ತಿರಲು, ಮರಣವೊಂದೇ ದೈತ್ಯ ನೋವುಗಳಿಗೆ ಅಂತಿಮ ಪರಿಹಾರ ಎಂದು ತೀರ್ಮಾನಿಸಿದರೂ ಅದಕ್ಕೆ ಅವಕಾಶ ಉಂಟೆ?

ಇದೀಗ ದೇಶದ ಸುಪ್ರೀಂ ಕೋರ್ಟ್ ಈ ಕುರಿತು ಚಾರಿತ್ರಿಕ ತೀರ್ಪು ನೀಡಿದೆ. ದಯಾ ಮರಣಕ್ಕೆ ಮನವಿ ಸಲ್ಲಿಸಿ, ಅದಕ್ಕೆ ಸ್ಪಂದನ ದೊರೆಯದೆ, ಕಣ್ಣೀರಿನ ದಿನಗಳನ್ನು ಕಳೆದು ಕಣ್ಮುಚ್ಚಿದ ಹಲವು ಪ್ರಕರಣಗಳನ್ನು ಗಮನಿಸಿದ ನ್ಯಾಯಾಲಯ, ಕೊನೆಗೆ ದಯಾ ಮರಣಕ್ಕೆ ಅಸ್ತು ಎಂದು ಹೇಳಿ ವಿಶ್ವದ ಬೆರಳೆಣಿಕೆಯ ರಾಷ್ಟ್ರಗಳ ಸಾಲಿಗೆ ಸೇರಿದೆ.

ಸಾವೇ ಅಂತಿಮ ಸ್ಥಿತಿ ಎಂಬ ಸ್ಥಿತಿಯಲ್ಲಿರುವ, ಸುದೀರ್ಘ ದೈಹಿಕ ಯಾತನೆಯಿಂದ ಮುಕ್ತಿ ಬಯಸಿ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದರೆ ಸಾಯುವ ರೋಗಿಯ ಹಕ್ಕನ್ನು ಮನ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರೋಗಿಯು ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಕುಟುಂಬದ ಎಲ್ಲ ಸಂಬಂಧಿತ ವ್ಯಕ್ತಿಗಳೂ ಒಕ್ಕೊರಲಿನ ತೀರ್ಮಾನಕ್ಕೆ ಬಂದರೆ, ವೈದ್ಯಕೀಯ ಮಂಡಳಿ ಗುಣರಹಿತ ಕಾಯಿಲೆ ಎಂದು ದೃಢೀಕರಿಸಿದರೆ ಮಾತ್ರ ದಯಾ ಮರಣಕ್ಕೆ ಸಮ್ಮತಿ ದೊರೆಯುತ್ತದೆ.

ನ್ಯಾಯಾಲಯದ ಮೇಲಿನ ತೀರ್ಮಾನ ಹೊರಬೀಳುತ್ತಿದ್ದಂತೇ ಉತ್ತರ ಪ್ರದೇಶದ ಶಶಿಮಿಶ್ರಾ (59) ಹಾಗೂ ಆಕೆಯ ಪುತ್ರಿ ಅನಾಮಿಕಾ (33) ದಯಾ ಮರಣ ದಯಪಾಲಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದಯಾ ಮರಣಕ್ಕೆ ವಿಶ್ವದ ಐದಾರು ರಾಷ್ಟ್ರಗಳಲ್ಲಿ ಮಾತ್ರ ಸಮ್ಮತಿ ಇದೆ. ಆದರೆ ಇದು ಗ್ರೀಕಿನಲ್ಲಿ 1800 ರಲ್ಲೇ ಚಾಲ್ತಿ ಇದ್ದ ಬಗ್ಗೆ, ಮಹಾನ್ ಚಿಂತಕ ಸಾಕ್ರೆಟಿಸ್, ಪ್ಲೂಟೋ ಹಾಗೂ ಇತರರ ಒಪ್ಪಿಗೆ ಇದ್ದ ಬಗ್ಗೆ ಉಲ್ಲೇಖಗಳಿವೆ. ಹಿಂದೂ ಧರ್ಮ, ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳು ಇದನ್ನು ವಿರೋಧಿಸುತ್ತವೆ. ಜೀವ ನೀಡಿದ ನಿಯಾಮಕನಿಗೆ ಮಾತ್ರ ಆ ಜೀವ ಕಸಿಯುವ ಹಕ್ಕಿದೆ ಎಂದು ಧರ್ಮಗಳು ಪ್ರತಿಪಾದಿಸುತ್ತವೆ.

ದಯಾ ಮರಣ ವಿಶ್ವದ ಹಲವೆಡೆ ಸಾಕಷ್ಟು ಚರ್ಚೆಯಲ್ಲಿದೆ. ವಿರೋಧ ಎದುರಿಸುತ್ತಿದೆ. ಹಲವರನ್ನು ಜೈಲಿಗಟ್ಟಿದೆ. ದಯಾ ಮರಣವು ಕೆಲವೊಮ್ಮೆ ಭಾವನಾತ್ಮಕ ಬಂಧನಗಳನ್ನು ತಂದೊಡ್ಡುತ್ತದೆ. ಕ್ಲಿಷ್ಟ ತೀರ್ಮಾನ ತೆಗೆದುಕೊಳ್ಳಬೇಕಾದ ಸಂದಿಗ್ಧತೆಗಳನ್ನು ಎದುರು ಮಾಡುತ್ತದೆ. ಸರಕಾರ, ಸಮಾಜ, ಕುಟುಂಬದ ವಿರೋಧಗಳಿಗೆ ಕಾರಣವಾಗುತ್ತದೆ.

ಸಂಯುಕ್ತ ರಾಷ್ಟ್ರದ ನ್ಯೂ ಬ್ರಿಂಗ್‍ಟನ್ನಿನಲ್ಲಿ ಫ್ರಾಂಕ್ ಲುಂಡ್ (58) ಎಂಬಾತ 33 ವರ್ಷದ ತನ್ನ ಪತ್ನಿಯೊಂದಿಗೆ ವಾಸವಿದ್ದ. ಅನ್ಯೋನ್ಯ ದಂಪತಿಗಳು. ಆದರೆ ಆಕೆಗೆ ಉದರ ಸಂಬಂಧ ಕಾಯಿಲೆ ಬಂದು ಬಹಳ ಬಳಲುತ್ತಾಳೆ. ಔಷಧ ಯಾವದೂ ಉಪಯೋಗವಾಗುವದಿಲ್ಲ. ಬಳಿಕ ಸಾಯಲು ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲಳಾಗುತ್ತಾಳೆ. ಪತಿ ಅಸಹಾಯಕನಾಗುತ್ತಾನೆ. ಸಾಯದಂತೆ ಭಿನ್ನವಿಸುತ್ತಾನೆ. ಆಕೆ ಆತನಲ್ಲಿ ಭಾಷೆ ಪಡೆಯುತ್ತಾಳೆ. ತನ್ನ ಆಸೆ ಈಡೇರಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಏನದು ಆಸೆ? ತನ್ನ ನೋವಿಗೆ ಮುಕ್ತಿ ಮರಣ ಮಾತ್ರ. ಅದಕ್ಕೆ ನೀನು ಸಹಕರಿಸಬೇಕು. ನಾನು ನನ್ನ ಹಾಸಿಗೆಯಲ್ಲೇ ಕೊನೆ ಯುಸಿರೆಳೆಯಬೇಕು. ಯಾವದೇ ಕಾರಣಕ್ಕೂ ನನ್ನನ್ನು ಆಸ್ಪತ್ರೆಗೆ ಕೊಂಡೊಯ್ಯಬಾರದು.

ತನ್ನ ಮುದ್ದು ಮಡದಿ ನರಳುವದನ್ನು ಸಹಿಸಲಾಗದ ಪತಿ ಒಂದು ದಿನ ಆಕೆ ಹೇಳಿದಂತೆ ಕೇಳುತ್ತಾನೆ. ಎಂಭತ್ತು ಪ್ಯಾರಸಿಟಿಮಾಲ್ ಮಾತ್ರೆ ತಂದು ನೀಡುತ್ತಾನೆ. ಆಕೆ 70 ಮಾತ್ರೆ ಸೇವಿಸಿ ವಾಂತಿ ಮಾಡಲಾರಂಭಿಸುತ್ತಾಳೆ. ಆಸ್ಪತ್ರೆಗೆ ಹೋಗೋಣ ಎಂದು ಆತ ಹೇಳಿದಾಗ ನೀಡಿದ ಭಾಷೆಯನ್ನು ನೆನಪಿಸುತ್ತಾಳೆ. ತಾನು ಸಾಯಬೇಕೆಂದು ಗೋಗರೆಯುತ್ತಾಳೆ. ಅಳಲಾರಂಭಿಸಿದ ಪತಿ ಒಂದು ಪ್ಲಾಸ್ಟಿಕ್ ತಂದು ಆಕೆಯ ಮುಖ ಮುಚ್ಚಿ - ದಿಂಬನ್ನು ಮುಖಕ್ಕೆ ಒತ್ತಿ ಆಕೆಗೆ ನೀಡಿದ ಮಾತು ಉಳಿಸಿಕೊಳ್ಳುತ್ತಾನೆ. ಆಕೆ ಕೊನೆಯುಸಿರೆಳೆಯುತ್ತಾಳೆ. ಈ ಬಗ್ಗೆ ತನ್ನ ಮಕ್ಕಳಿಗೆ ತಿಳಿಸುತ್ತಾನೆ.

ಫ್ರಾಂಕ್ ಲುಂಡ್ ಬಂಧನಕ್ಕೊಳಗಾಗುತ್ತಾನೆ. ನ್ಯಾಯಾಲಯದೆದುರು ಹೆಂಡತಿಯ ಅಣತಿಯಂತೆ ಆಕೆ ಸಾಯಲು ಸಹಕರಿಸಿದೆ ಎನ್ನುತ್ತಾನೆ. ವಿಚಾರಣೆ ನಡೆಸಿದ ನ್ಯಾಯಾಲಯ ಮೂರೇ ಘಂಟೆಗಳಲ್ಲಿ ಅವನಿಗೆ ಜೀವಾವಧಿ ಶಿಕ್ಷೆ ಘೋಷಿಸುತ್ತದೆ.

ಅಮೇರಿಕಾದಲ್ಲಿ ವೈದ್ಯ ಜ್ಯಾಕ್ ಕೆವೊರ್ಕಿಯನ್ ಎಂಬಾತ ‘ಕಿಲ್ಲರ್ ಡಾಕ್ಟರ್’ ಎಂದೇ ಹೆಸರುವಾಸಿ. ಆತ ತೀವ್ರ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಮರಣ ಕಲ್ಪಿಸುತ್ತಿದ್ದ. ಆತ್ಮಹತ್ಯೆಗೆ ಯಂತ್ರಗಳನ್ನು ಕಂಡು ಹಿಡಿದಿದ್ದ. ರೋಗಿಗಳು ಅವರಾಗೇ ಸಾವು ತಂದುಕೊಳ್ಳುವ ಕ್ರಮ ಹೇಳಿಕೊಡುತ್ತಿದ್ದ. ಸುಮಾರು 130 ಮಂದಿ ತನ್ನಿಂದಾಗಿ ನೋವಿನಿಂದ ಮುಕ್ತಿ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಒಮ್ಮೆ ಪಾರ್ಕಿನ್‍ಸನ್ ಕಾಯಿಲೆಯಿಂದ ಬಳಲುತ್ತಿದ್ದ ಒಬ್ಬಾಕೆಗೆ ತನ್ನ ವೋಕ್ಸ್‍ವ್ಯಾಗನ್ ವ್ಯಾನ್‍ನೊಳಗೇ ಸಾವಿನ ಮದ್ದು ನೀಡಿ ಮರಣ ಕಲ್ಪಿಸಿದ ಬಳಿಕ ಪೊಲೀಸರು ಆತನನ್ನು ಬಂಧಿಸುತ್ತಾರೆ. ಆತನ ವಿರುದ್ಧ ನಾಲ್ಕು ಮೊಕದ್ದಮೆಗಳನ್ನು ಹೂಡಲಾಗುತ್ತದೆ. ಆದರೂ ಆತ ದಯಾ ಮರಣ - ಸಾವಿನ ಹಕ್ಕಿನ ಕುರಿತು ರೇಡಿಯೋ, ಟಿ.ವಿ.ಗಳಲ್ಲಿ ಭಾಷಣ ಮಾಡುತ್ತಾನೆ. ಲೇಖನಗಳನ್ನು ಬರೆಯುತ್ತಾನೆ. ಮೂರು ಪ್ರಕರಣಗಳಲ್ಲಿ ಗೆದ್ದರೂ ಆತ ಒಂದು ಪ್ರಕರಣದಲ್ಲಿ ಸೋಲು ಅನುಭವಿಸುತ್ತಾನೆ. ಜೀವಾವಧಿ ಶಿಕ್ಷೆಗೆ ಒಳಗಾಗುತ್ತಾನೆ. ಆದರೆ ಆತ ಸಾವಿಗೆ ಸಹಕರಿಸುತ್ತಿದ್ದ ಬಗ್ಗೆ ಜನ ಮೆಚ್ಚುತ್ತಾರೆ. ಆತನ ಬಗ್ಗೆ ಪುಸ್ತಕಗಳು, ಸಿನೆಮಾಗಳು ಹೊರ ಬೀಳುತ್ತವೆ. ಆತನ ಉತ್ತಮ ನಡತೆಗಾಗಿ 1999 ರಲ್ಲಿ ಆತನನ್ನು ನ್ಯಾಯಾಲಯ ಬಿಡುಗಡೆ ಮಾಡುತ್ತದೆ. ಮತ್ತೆ ದಯಾ ಮರಣದ ಚಟುವಟಿಕೆಯಲ್ಲಿ ಭಾಗವಹಿಸಕೂಡದೆಂದು ಮುಚ್ಚಳಿಕೆ ಬರೆಸಿಕೊಳ್ಳುತ್ತದೆ. ಆದರೂ ಜೈಲಿನಿಂದ ಹೊರಬಂದ ಆತ ಚಟುವಟಿಕೆ ಮುಂದುವರೆಸುತ್ತಾನೆ. ನೋವಿನಲ್ಲಿರುವವರ ನೋವು ಶಮನ ಮಾಡುವದು ವೈದ್ಯನ ಹಕ್ಕು ಎಂದು ಪ್ರತಿಪಾದಿಸುತ್ತಾನೆ. ಆದರೂ ಆತ ಸ್ವತಃ ಕಾಯಿಲೆಗೊಳಗಾಗಿ 2011 ರಲ್ಲಿ ಅಸುನೀಗುತ್ತಾನೆ.

ಹೀಗೆ ದಯಾ ಮರಣದ ವಿಚಾರದಲ್ಲಿ ವಿಶ್ವದ ಎಲ್ಲೆಡೆ ಒಂದೇ ಅಭಿಪ್ರಾಯ ಅಸಾಧ್ಯವಾಗಿದೆ. ನೆದರ್‍ಲ್ಯಾಂಡ್ 2002 ರಲ್ಲಿ ದಯಾ ಮರಣ ಒಪ್ಪಿ ಕಾನೂನು ತಿದ್ದುಪಡಿ ಮಾಡುತ್ತದೆ. ಆ ಒಂದೇ ಸಾಲಿನಲ್ಲಿ 3136 ಮಂದಿ ಮರಣ ಅಪೇಕ್ಷಿಸುತ್ತಾರೆ. ಭಾರತದಲ್ಲೂ ಮರಣದೊಂದಿಗೆ ಹೋರಾಟ ಮಾಡುತ್ತಿರುವ ಮಂದಿಗೆ ದಯಾ ಮರಣ ವರದಾನವಾಗಲಿದೆ ಎಂಬದು ಜನಾಭಿಪ್ರಾಯ.

- ಬಿ.ಜಿ. ಅನಂತಶಯನ.