ಕೂಡಿಗೆ, ಮಾ. 17: ಬ್ಯಾಡಗೊಟ್ಟದಲ್ಲಿರುವ ದಿಡ್ಡಳಿ ನಿರಾಶ್ರಿತರ ತಾತ್ಕಾಲಿಕ ಮನೆಗಳ ನಿರ್ಮಾಣ ಮತ್ತು ಶೆಡ್‍ಗಳ ಕಳಪೆ ಕಾಮಗಾರಿ ಬಗ್ಗೆ ಹಾಗೂ ಗಿರಿಜನರಿಗೆ ಮಂಜೂರಾದ ಹಣವನ್ನು ಮನಬಂದಂತೆ ಖರ್ಚು ಮಾಡಿ ಸಮರ್ಪಕವಾಗಿ ಬಳಕೆ ಮಾಡದೆ ಜಿಲ್ಲಾ ಗಿರಿಜನ ಸಮನ್ವಯ ಇಲಾಖೆಯ (ಐಡಿಟಿಪಿ) ಅಧಿಕಾರಿ ಹಾಗೂ ಸಿಬ್ಬಂದಿ ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿ ಇವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಬ್ಯಾಡಗೊಟ್ಟದ ದಿಡ್ಡಳ್ಳಿ ನಿರಾಶ್ರಿತರು ಆಗ್ರಹಿಸಿದ್ದಾರೆ.
ದಿಡ್ಡಳ್ಳಿಯಿಂದ ಬ್ಯಾಡಗೊಟ್ಟಕ್ಕೆ ದನಗಳಂತೆ ಲಾರಿಯಲ್ಲಿ ತುಂಬಿಸಿಕೊಂಡು ಬಂದು ತಮಗೆ ಸೌಲಭ್ಯ ಒದಗಿಸಿದ್ದೇವೆ ಎಂದು ಭರವಸೆ ನೀಡಿ ಎಂಟು ತಿಂಗಳು ಕಳೆದಿದ್ದರೂ ಇದುವರೆಗೂ ಸಮರ್ಪಕವಾಗಿ ತಾತ್ಕಾಲಿಕ ಶೆಡ್‍ಗಳು ಸಹ ಆಗಿರುವದಿಲ್ಲ. ನಿರ್ಮಾಣ ಮಾಡಿರುವ ತಾತ್ಕಾಲಿಕ ಶೆಡ್‍ಗಳಿಗೆ ಐಡಿಟಿಪಿ ಇಲಾಖೆಯ ಅಧಿಕಾರಿಗಳು ಬಾಗಿಲನ್ನೂ ಸಹ ಅಳವಡಿಸಿಲ್ಲ. ಸರ್ಕಾರದಿಂದ ಲಕ್ಷಗಟ್ಟಲೆ ಹಣ ಬಿಡುಗಡೆಯಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆ ಬಂದು ಶೀಟ್‍ಗಳು ಹಾರಿಹೋಗಿ ನೆನೆಯು ತ್ತೇವೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಹಾಡಿಯ ಮುಖಂಡರ ಆಗ್ರಹವಾಗಿದೆ.
ಐಡಿಟಿಪಿ ಇಲಾಖೆಯ ಮೂಲಕ ಭೂಸೇನಾ ನಿಗಮಕ್ಕೆ ಕಾಮಗಾರಿ ನಿರ್ವಹಿಸಲು ವಹಿಸಿರುವ ಕಾಮ ಗಾರಿಯೂ ಕಳಪೆಯಾಗಿರುವದರಿಂದ ಜಿಲ್ಲಾಧಿಕಾರಿ ಕಛೇರಿಯ ಎದುರು ಪ್ರತಿಭಟನೆ ಮಾಡಲಾಗುವದು ಎಂದು ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಹಾಗೂ ಬ್ಯಾಡಗೊಟ್ಟ ಮುಖಂಡ ಮಲ್ಲಪ್ಪ, ಹಾಗೂ ಇತರರು ತಿಳಿಸಿದ್ದಾರೆ.