ಕುಶಾಲನಗರ, ಮಾ. 17: ಕೆಸರಿನಲ್ಲಿ ಸಿಲುಕಿಕೊಂಡು ಜೀವನ್ಮರಣದ ನಡುವೆ ನರಳಾಡುತ್ತಿದ್ದ ಕಾಡಾನೆ ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ರಂಗಸಮುದ್ರ ಬಳಿಯ ತೋಟವೊಂದರ ತೋಡಿನ ಕೆಸರಿನಲ್ಲಿ ಬುಧವಾರ ರಾತ್ರಿ ಸಿಲುಕಿಕೊಂಡ ಆನೆಯನ್ನು ಮರುದಿನ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಮೇಲೆತ್ತಲು ಪ್ರಯತ್ನಿಸಿ ಯಶಸ್ವಿಯಾದರೂ ಅದನ್ನು ಕಾಡಿಗಟ್ಟುವಲ್ಲಿ ವಿಫಲವಾಗಿದೆ. ಕೆಸರಿನಲ್ಲಿ ಹೂತುಹೋದ ಹೆಣ್ಣಾನೆ ಹೊರಬರಲಾಗದೆ ಬಹುತೇಕ ನಿತ್ರಾಣಗೊಂಡು ನಂತರ ಕಾರ್ಯಾಚರಣೆ ಸಂದರ್ಭ ಕೂಡ ಅಲ್ಪಸ್ವಲ್ಪ ಗಾಯಗಳಾಗುವದರೊಂದಿಗೆ ಎದ್ದು ನಿಲ್ಲಲು ಆಗದೆ ಆಹಾರ ಸೇವನೆಯ ಕಷ್ಟದೊಂದಿಗೆ ಇಹಲೋಕ ತ್ಯಜಿಸಿದೆ. ವನ್ಯಜೀವಿ ತಜ್ಞ ಡಾ.ಮುಜೀಬ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ತಂಡ ಸಾಕಾನೆಗಳ ಸಹಕಾರದೊಂದಿಗೆ ಆನೆಯ ಆರೈಕೆಗೆ ನಿರಂತರ ಶ್ರಮಿಸಿದ್ದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

ರಂಗಸಮುದ್ರದ ಹೊಸಪಟ್ಟಣ ಕಾಫಿ ಬೆಳೆಗಾರ ಪರ್ಲಕೋಟಿ ವಿಜು ಅವರ ತೋಟದಲ್ಲಿ ಆರೈಕೆಯಲ್ಲಿದ್ದ ಆನೆ ಎರಡು ದಿನಗಳ ಕಾಲ ಆಹಾರ ಸೇವನೆ ಮಾಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆಯ ಕಾಲಿಗೆ ಕೂಡ ತೀವ್ರ ಗಾಯ ಉಂಟಾದ ಹಿನ್ನಲೆಯಲ್ಲಿ ನಿಂತುಕೊಳ್ಳಲು ಕಷ್ಟಕರವಾಗಿತ್ತು. ಗ್ಲೂಕೋಸ್ ನಿರಂತರ ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ. ನಂತರ ಸಮೀಪದ ಅರಣ್ಯದಲ್ಲಿ ಆನೆಯ ಕಳೇಬರವನ್ನು ದಹಿಸಲಾಯಿತು.

ಗಂಡು ಕಾಡಾನೆ ಸಾವು

ಕುಟ್ಟ ಗ್ರಾಮದ ಕಾಳಿ ದೇವಸ್ಥಾನ ಸಮೀಪ ಬ್ರಹ್ಮಗಿರಿ ಅರಣ್ಯದಂಚಿನಲ್ಲಿ ಗಂಡು ಕಾಡಾನೆಯೊಂದು ಸಾವಿಗೀಡಾಗಿದೆ.

ಕಾಡಾನೆಗೆ ಅಂದಾಜು 40 ವರ್ಷ ವಯಸ್ಸಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸಂಜೆ ವೇಳೆಗೆ ಮರಣೋತ್ತರ ಪರೀಕ್ಷೆಯನ್ನು ಹುಣಸೂರು ವನ್ಯಜೀವಿ ಪಶುವೈದ್ಯಾಧಿಕಾರಿ ಡಾ. ಮುಜಿಬ್ ಮಾಡಿದರು. ಸ್ಥಳಕ್ಕೆ ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಎಂ.ಎಂ. ಜಯ, ವನ್ಯಜೀವಿ ವಿಭಾಗದ ವಾರ್ಡನ್ ಬೋಸ್ ಮಾದಪ್ಪ, ಎಸಿಎಫ್ ದಯನಂದ, ಶ್ರೀಮಂಗಲ ಆರ್‍ಎಫ್‍ಓ ವೀರೇಂದ್ರ ಮತ್ತಿತರರು ಭೇಟಿ ನೀಡಿ ಮಹಜರು ನಡೆಸಿದರು. 2 ದಿನಗಳ ಹಿಂದೆ ಕುಟ್ಟ ವ್ಯಾಪ್ತಿಯಲ್ಲಿ 2 ತಿಂಗಳ ಮರಿ ಸಹಿತ 3 ಕಾಡಾನೆಗಳು ಸಾವಿಗೀಡಾಗಿದ್ದವು.