ಸಿದ್ದಾಪುರ ಮಾ. 17: ಇತ್ತೀಚೆಗೆ ಸಿದ್ದಾಪುರ ಸಮೀಪದ ಅವರೆಗುಂದ ಅರಣ್ಯ ಪ್ರದೇಶದ ಒಳಗೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಲು ಸಹಕಾರ ನೀಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರಡಿಗೋಡು ಗ್ರಾಮದ ಅವರೆಗುಂದ ಅರಣ್ಯ ಪ್ರದೇಶದ ಒಳಗೆ ವಾಸಮಾಡಿಕೊಂಡಿರುವ ಹಾಲಪ್ಪ ಎಂಬವರ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವದು ಅಲ್ಲದೆ ಗಾಂಜಾ ಗಿಡಗಳ ನರ್ಸರಿ ಮಾಡಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಡಿವೈಎಸ್ಪಿ ಸುಂದರ್ ರಾಜ್ ಹಾಗೂ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜ್ ನೇತೃತ್ವದಲ್ಲಿ ಪೊಲೀಸರು ಧಾಳಿ ನಡೆಸಿ ಹಾಲಪ್ಪನನ್ನು ಬಂಧಿಸಿದ್ದರು.

ಈ ಸಂದರ್ಭ ಬೆಳೆಸಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಜಾ ಗಿಡ ಬೆಳೆಯಲು ಬಿತ್ತನೆ ಬೀಜವನ್ನು ಹಾಲಪ್ಪನಿಂದ ಖರೀದಿಸಿ ಮಾರಾಟ ಮಾಡಲು ಸಹಕರಿಸಿದ ಆರೋಪದಡಿ ನೆಲ್ಲಿಹುದಿಕೇರಿ ಬೆಟ್ಟದ ಕಾಡು ನಿವಾಸಿ ಮಂಜು (26) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿ ಹಾಲಪ್ಪನ ದೂರವಾಣಿಗೆ ಮಂಜು ಹಲವು ಬಾರಿ ಗಾಂಜಾ ಖರೀದಿಸಲು ಸಂಪರ್ಕಿಸಿದ್ದು ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಹಾಲಪ್ಪ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ.