*ಗೋಣಿಕೊಪ್ಪಲು, ಮಾ. 17: ವಿಧಾನಸಭಾ ಚುನಾವಣೆಯ ಎರಡು ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯಲ್ಲಿ ಯಾವದೇ ಗೊಂದಲ ಬೇಡ. ಜಿಲ್ಲೆಯ 2 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ನಡೆದಿಲ್ಲ. ಕೇಂದ್ರ ಸಮಿತಿ ತೆಗೆದು ಕೊಳ್ಳುವ ನಿರ್ಧಾರಕ್ಕೆ ಕಾರ್ಯಕರ್ತರು ಬದ್ಧರಾಗುವಂತೆ ಕೇಂದ್ರ ಸಚಿವ ಸದಾನಂದ ಗೌಡ ಸೂಚಿಸಿದ್ದಾರೆ. ಪರಿಮಳ ಮಂಗಳ ವಿಹಾರದಲ್ಲಿ ತಾಲೂಕು ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಬಿ.ಜೆ.ಪಿ. ಮಂಡಳ ಮಹಾ ನವಶಕ್ತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಭಾರತೀಯ ಜನತಾ ಪಕ್ಷದಲ್ಲಿ ಚುನಾವಣೆಗೆ ಅಭ್ಯರ್ಥಿಯ ಆಯ್ಕೆ ನಡೆದಿಲ್ಲ. ಕೆಲವರು ತಾವೇ ಸ್ವಯಂ ಘೋಷಿತ ಅಭ್ಯರ್ಥಿ ಎಂದು ಹೇಳುತ್ತಾ ಗೊಂದಲ ಸೃಷ್ಠಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅಭ್ಯರ್ಥಿಯ ಅಂಕಾಕ್ಷಿಯಾಗುವ ಅರ್ಹತೆ ಇದೆ. ಪ್ರತಿಯೊಬ್ಬರು ತಮಗೆ ಟಿಕೇಟ್ ನೀಡುವಂತೆ ಕೇಳುವ ಹಕ್ಕು ಇದೆ. ಆದರೆ ಹೈಕಮಾಂಡ್ ತೀರ್ಮಾನ ದಂತೆ ನಡೆಯಲಿದೆ. ಇದರಲ್ಲಿ ಕಾರ್ಯಕರ್ತರು ಯಾವದೇ ಗೊಂದಲೆಕ್ಕೆ ಒಳಗಾಗದೆ ಪಕ್ಷಕ್ಕೆ ಬದ್ಧರಾಗಿ ಎಂದು ಕರೆ ನೀಡಿದರು.

ಸಿದ್ದರಾಮಯ್ಯ ಅವರ ಆಡಳಿತದ ಕೊನೆಯ ದಿನಗಳು ಎಣಿಸುತ್ತಿದ್ದಾರೆ. ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದ ಇವರು ಅಭಿವೃದ್ದಿ ಕಾರ್ಯಗಳಿಗೆ ಸ್ಪಂದಿಸಿಲ್ಲ. ಕೊಡಗನ್ನು ತೀವ್ರವಾಗಿ ಕಡೆಗಣಿಸಲಾಗಿದೆ. ಆಡಳಿತ ಕೊನೆಯ ದಿನಗಳಲ್ಲಿ ರಸ್ತೆಗಳಿಗೆ ಕಲ್ಲು ಗಳನ್ನು ಹಾಕುವ ಮೂಲಕ ಜನರನ್ನು ಒಲಿಸುವ ತಂತ್ರಕ್ಕೆ ಮುಂದಾಗಿದ್ದಾರೆ.

ಕೇಂದ್ರದ ಮೋದಿ ಸರ್ಕಾರದ ಆಡಳಿತದಲ್ಲಿ ಯಾವದೇ ಒಬ್ಬ ಸಂಸದ ಹಾಗೂ ಸಚಿವರಲ್ಲಿ ಸಣ್ಣ ಭ್ರಷ್ಟಾಚಾರದ ಕೊಳೆಯು ಅಂಟಿಕೊಂಡಿಲ್ಲ. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನನ್ನು ಸ್ವಾಭಿಮಾನಿಯಾಗಿ ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಪ್ರಧಾನಮಂತ್ರಿಗಳು ರಾಜ್ಯ ಸರ್ಕಾರಕ್ಕೆ ಅನುಧಾನದ ಬಗ್ಗೆ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಆದರೆ ಲೆಕ್ಕ ಕೊಡಲು ಸಿದ್ದರಾಮಯ್ಯನವರಲ್ಲಿ ಯಾವದೇ ದಾಖಲಾತಿಗಳಿಲ್ಲ. ಇರುವದು ಮಂತ್ರಿಗಳ ಮನೆಯ ಡೈರಿಯಲ್ಲಿ ಅಡಗಿದೆ ಎಂದು ಕುಟುಕಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾರ್ಯಕರ್ತರೇ ಬಿ.ಜೆ.ಪಿ.ಯ ಆಸ್ತಿ. ಕಾರ್ಯಕರ್ತರು ಕೈಜೋಡಿಸಿದರೆ ಬಿ.ಜೆ.ಪಿ.ಯ ಗೆಲುವು ಸಾಧ್ಯ. ಕೊಡಗಿನಲ್ಲಿ ಬಿ.ಜೆಪಿ. ಭದ್ರ ಕೋಟೆಯನ್ನು ಒಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಿರುವ ಈ ಭಾರಿಯ ಚುನಾವಣೆ ಕುತೂಹಲವಾಗಿದ್ದು, ಬಿ.ಜೆಪಿ.ಯ ಪ್ರತಿಷ್ಠೆಯೂ ಹೌದು. ಕಾಂಗ್ರೆಸ್ ಪಕ್ಷದ ನಿಷ್ಠತೆಯ ಬಗ್ಗೆ ಅವರ ಹಿರಿಯ ಮುಖಂಡರೇ ಟೀಕೆ ಮಾಡುತ್ತಿದ್ದಾರೆ. ಮೋದಿ ಅವರು ಹೇಳಿದ 10% ಸರ್ಕಾರ ಎಂದು ಹೇಳಿದ್ದನ್ನು

(ಮೊದಲ ಪುಟದಿಂದ) ಅವರ ನಾಯಕ ವೀರಪ್ಪ ಮೊಯ್ಲಿಯವರೇ ಮತ್ತೆ ಪುನರುಚ್ಚಿಸಿ ಸತ್ಯ ನುಡಿದಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಅನುದಾನ ನೀಡಿ ಎಂದು ಕೇಳಿದರೆ ಹಣವಿಲ್ಲ ಎಂದು ಉತ್ತರಿಸುತ್ತಾರೆ. ನಮ್ಮ ಸರ್ಕಾರವಿದ್ದಾಗ 48 ಕೋಟಿಯನ್ನು ಕುಡಿಯುವ ನೀರಿಗಾಗಿ ಅನುಧಾನಕ್ಕೆ ಮೀಸಲಿಟ್ಟಿತ್ತು ಎಂದು ಹೇಳಿದರು.

ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ ಕಾಂಗ್ರೆಸ್ ಶಾಸಕರ ಮಕ್ಕಳು ಗೂಂಡಾಗಿರಿ ಮಾಡುತ್ತಿದ್ದಾರೆ. ಅತ್ಯಾಚಾರ, ಅನಾಚಾರಗಳು ನಡೆಯುತ್ತಿದೆ. ಅತ್ಯಾಚಾರ ಕೊಲೆಗಳಿಗೆ ಕುಮ್ಮಕ್ಕು ನೀಡುವ ಸರ್ಕಾರ ಕಾಂಗ್ರೆಸ್ ಎಂದು ಹೇಳಿದರು. ಕೋಟಿ ಅನುದಾನ ನೀಡಿದ್ದೇವೆ ಎಂದು ಹೇಳುವ ಸರ್ಕಾರ ಇದುವರೆಗೆ 48 ಕೋಟಿಯಷ್ಟೇ ಜಿಲ್ಲೆಗೆ ನೀಡಿದೆ. ನಮ್ಮ ಸರ್ಕಾರ 200 ಕೋಟಿ ಅನುದಾನ ನೀಡಿ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿತ್ತು. 2 ಲಕ್ಷದ 42 ಸಾವಿರ ಕೋಟಿ ಸಾಲ ಮಾಡಿರುವದೇ ಇವರ ಹೆಗ್ಗಳಿಕೆ ಎಂದರು.

ಸೋಮವಾರಪೇಟೆ ತಾಲೂಕಿನಲ್ಲಿ ಗೌಡ ಜನಾಂಗದವರೇ ಹೆಚ್ಚಿದರೂ ಯಾವದೇ ಜಾತಿ ಭೇದ ಬೆಳೆಸದೆ ಕೊಡವನಾದ ತನ್ನನ್ನು 2 ಬಾರಿ ಆಯ್ಕೆ ಮಾಡಿದ್ದಾರೆ. ಕೆಲವು ಕಿಡಿಗೇಡಿಗಳು ಸೋಲಿನ ಭಯದಿಂದ ಜಾತೀಯ ವಿಷಬೀಜ ಬಿತ್ತುತ್ತಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿ ಕೊಡವರ ಸಂಖ್ಯೆ ಹೆಚ್ಚಿದ್ದರೂ ಕೆ.ಜಿ. ಬೋಪಯ್ಯನವರನ್ನು ಗೆಲ್ಲಿಸಿರುವದು ಯಾವದೇ ಜಾತಿ ರಾಜಕೀಯ ಇಲ್ಲ ಎಂಬವದನ್ನು ತಿಳಿಸುತ್ತದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಗೆ ಕಾಂಗ್ರೆಸ್ ಸರ್ಕಾರ ಕೊಡುಗೆ ಎಂದು ಟಿಪ್ಪು ಜಯಂತಿ ಆಚರಣೆಯಾಗಿದೆ. ಮತಾಂಧ ಟಿಪ್ಪುಅನ್ನು ಕನಕದಾಸ, ಬಸವಣ್ಣನವರಿಗೆ ಹೋಲಿಸುತ್ತಿರುವದು ಕಾಂಗ್ರೆಸಿಗರ ಅಜ್ಞಾನವನ್ನು ತೋರ್ಪಡಿಸುತ್ತದೆ ಎಂದರು.

ಕೇರಳದ ಬಿ.ಜೆ.ಪಿ. ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ರಂಜಿತ್ ಮಾತನಾಡಿ ತ್ರಿಪುರ ಚುನಾವಣೆ ನಂತರ ಬಿ.ಜೆಪಿ.ಯಲ್ಲಿ ಮತ್ತಷ್ಟು ಬಲಶಕ್ತಿ ವೃದ್ಧಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಬಿ.ಜೆ.ಪಿ.ಯನ್ನು ಗೆಲ್ಲಿಸುವದು ಗುರಿಯಾಗಿದೆ. ಇದಕ್ಕೆ ಬೇಕಾದ ಪೂರಕ ತಯಾರಿ ನಡೆದಿದೆ ಎಂದು ಹೇಳಿದರು.

ಈ ಸಂದರ್ಭ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ವಿ. ಭಾರತೀಶ್, ಬಿ.ಜೆ.ಪಿ ರಾಜ್ಯ ಸಮಿತಿಯ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ತಾಲೂಕು ಮಂಡಳ ಬಿಜಿಪಿ ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ, ಸುವೀನ್ ಗಣಪತಿ, ಜಿಲ್ಲಾ ಬಿ.ಜೆಪಿ ಮಹಿಳಾ ಅಧ್ಯಕ್ಷ ಯಮುನಾ ಚಂಗಪ್ಪ, ತಾಲೂಕು ಅಧ್ಯಕ್ಷ ಸುಮಿ ಸುಬ್ಬಯ್ಯ, ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಮಿಟ್ಟು ರಂಜಿತ್, ಮಂಡಳ ಹಿಂದುಳಿದ ವರ್ಗ ಅಧ್ಯಕ್ಷ ರಾಜ ಚಂದ್ರಶೇಖರ್ ಎಸ್. ಟಿ. ಮೋರ್ಚಾ ಅಧ್ಯಕ್ಷ ಪರಮೇಶ್ವರ್, ಎಸ್. ಸಿ. ಮೋರ್ಚಾ ಅಧ್ಯಕ್ಷ ಜಯಾ ಪೂವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ರಾಜ್ಯ ಅಲ್ಪಸಂಖ್ಯಾತ ಕಾರ್ಯದರ್ಶಿ ಜೋಕಿಂಗ್, ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಡೇಮಾಡ ಗಿರೀಶ್ ಗಣಪತಿ, ಆರ್ಥಿಕ ಪ್ರಕೋಷ್ಠ ಅಧ್ಯಕ್ಷ ಬೊಟ್ಟಂಗಡ ರಾಜು, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ನ, ಮೂಕಂಡ ಶಶಿ ಸುಬ್ರಮಣಿ, ವಿಜು ಸುಬ್ರಮಣಿ, ಅಚ್ಚಪಂಡ ಮಹೇಶ್, ತಾ.ಪಂ. ಅಧ್ಯಕ್ಷೆ ಸ್ಮೀತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಮಾಜಿ ತಾ.ಪಂ. ಅಧ್ಯಕ್ಷೆ ರಾಣಿ ನಾರಾಯಣ್, ಗ್ರಾ.ಪಂ. ಅಧ್ಯಕ್ಷ ಸೆಲ್ವಿ, ಸದಸ್ಯ ರಾಮಕೃಷ್ಣ, ರತಿ ಅಚ್ಚಪ್ಪ ಹಾಗೂ ಇತರರು ಹಾಜರಿದ್ದರು.

ಚಿತ್ರ ವರದಿ : ದಿನೇಶ್. ಎನ್.ಎನ್.