ಮಡಿಕೇರಿ, ಮಾ. 17: ಕಳೆದ 2009ರಲ್ಲಿ ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾಪನೆ ಬಳಿಕ ಮಹಾದ್ವಾರದ ಬಾಗಿಲು ಮಾತ್ರ ಸಿದ್ಧಗೊಂಡಿರಲಿಲ್ಲ. ದೇವಾಲಯದ ಹಿಂಬಾಗಿಲು ಕೂಡ ತಯಾರಾಗಿರಲಿಲ್ಲ. ಕಳೆದ 9 ವರ್ಷಗಳು ದ್ವಾರದ ಬಾಗಿಲುಗಳೇ ಇಲ್ಲದೆ ದೇವಾಲಯದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ನಿರ್ವಹಿಸ ಲ್ಪಡುತ್ತಿವೆ. ಇದೀಗ ಯುಗಾದಿಯ ಹೊಸ ವರ್ಷ ಪ್ರವೇಶ ವಾಗುತ್ತಿದ್ದಂತೆಯೇ ದೇವಾಲಯದ ಮಹಾದ್ವಾರದ ಮುಂಬಾಗಿಲು ಮತ್ತು ಹಿಂಬಾಗಿಲು ಗಳನ್ನು ಅಳವಡಿಸಲು ಸಜ್ಜುಗೊಳಿಸ ಲಾಗುತ್ತಿದೆ.

ಮಡಿಕೇರಿ ಮಂಡೀರ ದೇವಿ ಪೂಣಚ್ಚ ಅವರು ತಮ್ಮ ತಂದೆ - ತಾಯಿ ಅಪ್ಪಚ್ಚ ಹಾಗೂ ಬೋಜಮ್ಮ ಇವರುಗಳ ಸ್ಮರಣಾರ್ಥ ಎರಡು ಬಾಗಿಲುಗಳನ್ನು ದೇವಾಲಯಕ್ಕೆ ಕೊಡುಗೆ ನೀಡಲಿದ್ದಾರೆ.

ಕಳೆದ ಕೆಲವು ಅವಧಿಯಿಂದ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಮಹಾದ್ವಾರ ಬಾಗಿಲಿನ ಕರಕುಶಲ ಕೆಲಸಗಳು ನಡೆಯುತ್ತಿವೆ. ಸುಮಾರು 20 ಅಡಿ ಎತ್ತರದ ಮಹಾದ್ವಾರದ ಬಾಗಿಲಿನಲ್ಲಿ ವಿವಿಧ ದೇವತೆಗಳ ಕೌಶಲ್ಯಯುತ ಕಲಾತ್ಮಕ ಕೆತ್ತನೆಗಳು ಹಾಗೂ ಇತರ ವಿನ್ಯಾಸಗಳೊಂದಿಗೆ ತಯಾರಿ ನಡೆದಿದೆ. ಇದಕ್ಕೆ ಪೂರಕವಾಗಿ ದ್ವಾರದಲ್ಲಿ ಸ್ಥಾಪಿಸಲು ಸ್ಟೀಲ್ ಸರಳುಗಳ ಜೋಡಣಾ ಕಾರ್ಯವು ನಡೆಯುತ್ತಿದೆ. ಬೃಹತ್ ಸಂಪಿಗೆ ಮರದಲ್ಲಿ ಈ ಭವ್ಯ ಬಾಗಿಲು ಸಿದ್ಧಗೊಳ್ಳುತ್ತಿದ್ದು, ಸದ್ಯದಲ್ಲಿಯೇ ಇವುಗಳನ್ನು ಭಗಂಡೇಶ್ವರ ದೇವಾಲಯದ ಸಾನ್ನಿಧ್ಯದಲ್ಲಿ ಅಳವಡಿಸಲಿರುವದಾಗಿ ತಿಳಿದು ಬಂದಿದೆ.

ಈ ಬಾಗಿಲುಗಳ ಕೆತ್ತನೆಯ ಕೆಲಸವನ್ನು ದಾನಿ ದೇವಿ ಪೂಣಚ್ಚ, ಓಂಕಾರೇಶ್ವರ ದೇವಾಲಯದ ನಿರ್ವಹಣಾಧಿಕಾರಿ ಸಂಪತ್ ಕುಮಾರ್ ತಲಕಾವೇರಿ- ಭಾಗಮಂಡಲ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ಸಮಿತಿಯ ಹಿಂದಿನ ಗೌರವ ಕಾರ್ಯದರ್ಶಿ ಜಿ. ರಾಜೇಂದ್ರ ಇವರುಗಳು ಖುದ್ದು ತೆರಳಿ ಇಂದು ಪರಿಶೀಲನೆ ನಡೆಸಿದರು.