ಸೋಮವಾರಪೇಟೆ, ಮಾ. 17: ಗೌಡಳ್ಳಿಯ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಅಲ್ಲಿನ ಬಿಜಿಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿರುವ 2ನೇ ವರ್ಷದ ರಾಜ್ಯಮಟ್ಟದ ಹಿಂದು ಕಪ್ ಫುಟ್ಬಾಲ್ ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಗೌಡಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ತಾಲೂಕು ಬಿಜೆಪಿ ಕಾರ್ಯಾಧ್ಯಕ್ಷ ಎಸ್.ಎ. ಸುರೇಶ್ ಅವರುಗಳು ಪಂದ್ಯಾವಳಿಗೆ ಚಾಲನೆ ನೀಡಿದರು.
ವಿ.ಎ.ಎಸ್.ಬಾಯ್ಸ್, ಒಡೆಯನಪುರ ಫುಟ್ಭಾಲ್ ಕ್ಲಬ್, ಟಿಡಿಎಲ್‍ಎಫ್‍ಸಿ ಬೈಲುಕೊಪ್ಪ, ಪಾಲಿಬೆಟ್ಟ ಎಫ್‍ಸಿ, ಮಾರ್ನಿಂಗ್ ಬಾಯ್ಸ್, ಎಫ್.ಸಿ.ಬೀಟಿಕಟ್ಟೆ, ಗೋಲ್ಡನ್ ಗೈಸ್ ಗೌಡಳ್ಳಿ, ಹೆಗ್ಗುಳ ಸೋಮು ಫ್ರೆಂಡ್ಸ್, ಏಂಜಲ್ಸ್ ಎಫ್‍ಸಿ, ಸಾಯಿ ಎಜುಕೇಷನ್ ಟ್ರಸ್ಟ್ ಆಲೂರು ಸಿದ್ದಾಪುರ, ಫೆಂಡ್ಸ್ ಫುಟ್ಭಾಲ್ ಕ್ಲಬ್, ಭಾರತಿ ಕಾಲೇಜು, ಮೆರಿಡಿಯನ್ ಕಾಲೇಜು ಉಲ್ಲಾಳ, ಭಜರಂಗದಳ ಶುಂಠಿ ಸೇರಿದಂತೆ ಒಟ್ಟು 14 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ.
ಉದ್ಘಾಟನಾ ಸಮಾರಂಭದಲ್ಲಿ ಪೌಢಶಾಲಾ ಮುಖ್ಯ ಶಿಕ್ಷಕ ನಾಗೇಂದ್ರ, ನಿವೃತ್ತ ಮುಖ್ಯ ಶಿಕ್ಷಕ ಹಾಲೇಬೇಲೂರು ನಿರ್ವಾಣಿಶೆಟ್ಟಿ, ಹಿಂದು ಗೆಳೆಯರ ಬಳಗದ ಅಧ್ಯಕ್ಷ ಜಿ.ಎಸ್.ಪ್ರಸನ್ನ, ಕಾರ್ಯಾಧ್ಯಕ್ಷ ಜಿ.ಪಿ.ಸುನಿಲ್, ಪದಾಧಿಕಾರಿಗಳಾದ ಎಚ್.ಎಂ.ಜಿತೇಂದ್ರ, ನವೀನ್ ಅಜ್ಜಳ್ಳಿ, ಸುದೀನ ಮತ್ತಿತರರು ಇದ್ದರು.
ಹತ್ತು ಮಂದಿ ವಿದೇಶಿ ಆಟಗಾರ ರಿರುವ ಬಲಿಷ್ಠ ಹೆಗ್ಗುಳ ಸೋಮು ಫ್ರೆಂಡ್ಸ್ ತಂಡ ಉದ್ಘಾಟನಾ ಪಂದ್ಯದಲ್ಲಿ ಆಕರ್ಷಕ ಆಟವನ್ನು ಪ್ರದರ್ಶಿಸಿ, ಏಂಜಲ್ ಎಫ್.ಸಿ.ತಂಡದ ವಿರುದ್ಧ 7-1 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ಫುಟ್ಭಾಲ್ ಪ್ರೇಮಿಗಳನ್ನು ರಂಜಿಸಿದರು.
2ನೇ ಪಂದ್ಯಾದಲ್ಲಿ ಟಿಡಿಎಲ್‍ಎಫ್ ತಂಡ, ಪಾಲಿಬೆಟ್ಟ ತಂಡದ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. 3ನೇ ಪಂದ್ಯದಲ್ಲಿ ಸಾಯಿ ಎಜುಕೇಷನ್ ಟ್ರಸ್ಟ್ ಆಲೂರು ಸಿದ್ದಾಪುರ ತಂಡ ಫ್ರೆಂಡ್ಸ್ ಫುಟ್ಭಾಲ್ ತಂಡವನ್ನು 3-0 ಗೋಲುಗಳಿಂದ ಮಣಿಸಿತು. 4ನೇ ಪಂದ್ಯದಲ್ಲಿ ವಿ.ಎ.ಎಸ್ ಬಾಯ್ಸ್ ಶಾಂತವೇರಿ ತಂಡ, ಒಡೆಯನಪುರ ಎಫ್ ಸಿ ವಿರುದ್ಧ 3-0ಗೋಲುಗಳ ಅಂತರದಲ್ಲಿ ಗೆಲುವು ಪಡೆಯಿತು. 5ನೇ ಪಂದ್ಯದಲ್ಲಿ ಬೀಟಿಕಟ್ಟೆ ಫುಟ್ಬಾಲ್ ತಂಡ, ಮಾರ್ನಿಂಗ್ ಬಾಯ್ಸ್ ತಂಡದ ವಿರುದ್ಧ 2-0 ಗೋಲು ಅಂತರ ಗೆಲುವು ಪಡೆದರು.
ವಿದೇಶಿ ಆಟಗಾರರ ಆಕರ್ಷಣೆ: ಅಯೋಡಿಲೆ ಒಲಕುನ್ಲೆ, ಅಜಾಯಿ ಅಬ್ಯುದುನ್, ಯುಗೊ ಆಂಥೋಣಿ, ನಾಥನಿಲ್ ಅಮೋಸ್, ಕುಡೂಸ್ ಒಲಡಿಲೆ, ಸ್ಟೀಪನ್ ಉಮೆಹ, ಮೈಥಿ ಎಲಿಜಾ, ಉಜೋಚಿಯಾನೊ, ಉಜೋಡಿನ್ಮಾ, ಜಾಬ್ ಜಸ್ಟೀನ್ ಕೆವನ್, ಜಿಯೊ ಒಸಿಲಾಮ್, ನೈಜಿರಿಯಾ ಕೋಚ್, ಒಬೆನ್ ಸಂಡೆ ಅವರುಗಳು ನೈಜೀರಿಯಾ ತಂಡದಲ್ಲಿದ್ದು, ಪಂದ್ಯಾಟದ ಪ್ರಮುಖ ಆಕರ್ಷಣೆ ಯಾಗಿದ್ದಾರೆ. ಈ ತಂಡದ ಪ್ರಾಯೋಜಕತ್ವವನ್ನು ಉದ್ಯಮಿ ಹೆಗ್ಗುಳ ಸೋಮಶೇಖರ್ ವಹಿಸಿದ್ದಾರೆ.
ಗೌಡಳ್ಳಿ ಪ್ರವೀಣ್, ನವೀದ್, ಇಬ್ರಾಹಿಂ, ದರ್ಶನ್, ಶಬೀರ್ ಅವರುಗಳು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಂದು ಸಮಾರೋಪ: ತಾ. 18 ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ವತಿಯಿಂದ ಮಹಿಳಾ ಫುಟ್ಬಾಲ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. 3 ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.