ಮಡಿಕೇರಿ, ಮಾ. 16 : ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ಕುಟುಂಬಗಳ ನಡುವೆ ವರ್ಷಂಪ್ರತಿ ನಡೆಯುವ ಕ್ರಿಕೆಟ್ ಹಬ್ಬದ ಆತಿಥ್ಯವನ್ನು ಈ ಬಾರಿ ಚೆರಿಯಮನೆ ಕುಟುಂಬಸ್ಥರು ವಹಿಸಿಕೊಂಡಿದ್ದು, ಪಂದ್ಯಾವಳಿಯು ಏ.13ರಿಂದ ಮೇ 1 ರವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದÀ ವೇದಿಕೆಯ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಗೌಡ ಜನಾಂಗದ ನಡುವೆ ಒಗ್ಗಟ್ಟು, ಸಂಘಟನೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವದರೊಂದಿಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಚೆರಿಯಮನೆ ಕ್ರಿಕೆಟ್ ಹಬ್ಬಕ್ಕೆ ಏ.13 ರಂದು ಚಾಲನೆ(ಮೊದಲ ಪುಟದಿಂದ) ಕುಟುಂಬವಾರು ಕ್ರಿಕೆಟ್ ಹಬ್ಬವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದ್ದು, ಈ ಬಾರಿ ಚೆರಿಯಮನೆ ಕುಟುಂಬಸ್ಥರು ಆತಿಥ್ಯ ವಹಿಸಿಕೊಂಡಿದ್ದಾರೆ ಎಂದರು.

ಕಳೆದ ಬಾರಿ ನಡೆದ ಪೈಕೇರ ಕಪ್ ಹಬ್ಬದಲ್ಲಿ ಅತಿ ಹೆಚ್ಚು ಅಂದರೆ 210 ಕುಟುಂಬ ತಂಡಗಳು ನೋಂದಾಯಿಸಿಕೊಂಡಿದ್ದು, ಈ ಬಾರಿ 230-250 ಕುಟುಂಬ ತಂಡಗಳನ್ನು ನಿರೀಕ್ಷಿಸಲಾಗಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಈಗಾಗಲೇ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪಂದ್ಯಾವಳಿಯ ಲಾಂಛನವನ್ನು ಬಿಡುಗಡೆ ಮಾಡಲಾಗಿದ್ದು, ಹಲವಾರು ಪೂರ್ವಭಾವಿ ಸಭೆಗಳನ್ನೂ ನಡೆಸಲಾಗಿದೆ. ಎರಡು ಪಿಚ್‍ಗಳನ್ನು ನಿರ್ಮಿಸಿ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದ್ದು, ಉದ್ಘಾಟನಾ ಸಮಾರಂಭದಂದು ಹಿರಿಯ ಸ್ವಾಮೀಜಿಗಳು, ಕೇಂದ್ರದ ಮಂತ್ರಿಗಳು, ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಕ್ರಿಕೆಟ್ ಪಂದ್ಯಾವಳಿಗೆ ಅತಿ ಹೆಚ್ಚು ತಂಡಗಳನ್ನು ನಿರೀಕ್ಷಿಸಲಾಗುತ್ತಿದ್ದು, ತಂಡಗಳ ನೋಂದಣಿಗೆ ಮಾ.28ರವರೆಗೂ ಕಾಲಾವಕಾಶ ನೀಡಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಟೈಸ್ ಹಾಕಲಾಗುವದು ಎಂದು ತಿಳಿಸಿದ ಮನೋಜ್, ಕಳೆದ ಎರಡು ವರ್ಷಗಳಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕೂಡ ನಡೆಸಿಕೊಂಡು ಬರಲಾಗುತ್ತಿದ್ದು, ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿದೆ ಎಂದರು. ಈ ಬಾರಿಯೂ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಕಳೆದ ವರ್ಷ ಆರಂಭಿಸಿದ ಮಹಿಳಾ ಕಬಡ್ಡಿಗೂ ಉತ್ತಮ ಸ್ಪಂದನೆ ಲಭಿಸಿರುವದರಿಂದ ಈ ಬಾರಿ ಹೆಚ್ಚಿನ ತಂಡಗಳ ನಿರೀಕ್ಷೆಯೊಂದಿಗೆ ಮಹಿಳಾ ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿಯನ್ನೂ ಆಯೋಜಿಸ ಲಾಗುತ್ತಿದೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವದಲ್ಲದೆ, ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ಮಧುಮೇಹ ತಪಾಸಣಾ ಶಿಬಿರಗಳನ್ನು ನಡೆಸಲಾಗುವದು. ಇದರೊಂದಿಗೆ ಗೌಡ ಸಂಸ್ಕøತಿ ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುವದು ಎಂದು ಮನೋಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ನಿರ್ದೇಶಕ ಪುದಿಯನೆರವನ ರಿಷಿತ್ ಮಾದಯ್ಯ, ಚೆರಿಯಮನೆ ಕುಟುಂಬದ ಕಾರ್ಯದರ್ಶಿ ಚೆರಿಯಮನೆ ಮಾದಪ್ಪ ಹಾಗೂ ಕ್ರೀಡಾ ಸಮಿತಿ ನಿರ್ದೇಶಕ ಶ್ರೀಕಾಂತ್ ಉಪಸ್ಥಿತರಿದ್ದರು.