*ಗೋಣಿಕೊಪ್ಪಲು, ಮಾ. 16: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರು ಮೇಲೆ ಹುಲಿ ಧಾಳಿ ನಡೆಸಿ ಹಸುವೊಂದನ್ನು ಕೊಂದು ಹಾಕಿರುವ ಘಟನೆ ಬಾಳೆಲೆ ಸಮೀಪದ ಕೊಟ್ಟಗೇರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯ ಅವರಿಗೆ ಸೇರಿದ ಕೊಟ್ಟಿಗೆಗೆ ರಾತ್ರಿ 8 ಗಂಟೆ ವೇಳೆಗೆ ನುಗ್ಗಿರುವ ಹುಲಿ ಕಟ್ಟಿ ಹಾಕಿದ್ದ ಹಸುವನ್ನು ಕೊಂದು ಹಾಕಿದೆ. ಬಳಿಕ ಕಟ್ಟಿ ಹಾಕಿದ್ದ ಹಸುವಿನ ಗೂಟ ಕಿತ್ತು ಸುಮಾರು 300 ಮೀಟರ್ ದೂರಕ್ಕೆ ಎಳೆದೊಯ್ದು ಹಿಂಭಾಗವನ್ನು ತಿಂದು ಹಾಕಿದೆ. ಹಸುವನ್ನು ರಾತ್ರಿಯೇ ನೋಡಿದ ಮುದ್ದಯ್ಯ (ಮೊದಲ ಪುಟದಿಂದ) ಹುಡುಕಾಡಿದರೂ ಕತ್ತಲೆಯಲ್ಲಿ ಕಾಣಿಸಲಿಲ್ಲ. ಇಂದು ಬೆಳಿಗ್ಗೆ ಮತ್ತೆ ಹುಡುಕಿದಾಗ ವಾಸದ ಮನೆಯಿಂದ 100 ಮೀಟರ್ ದೂರದ ತೋಟದಲ್ಲಿಯೇ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಇಟ್ಟಿದ್ದ ಸಿಸಿ ಕ್ಯಾಮೆರಾದಲ್ಲಿ ಹುಲಿ ಧಾಳಿ ಮಾಡಿರುವದು ಗೋಚರಿಸಿದೆ.
ಕಲ್ಲಳ್ಳ ಆರ್‍ಎಫ್‍ಒ ಶಿವರಾಂ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಟ್ಟಗೇರಿ ಗ್ರಾಮ ಪೊನ್ನಂಪೇಟೆ ವಲಯದ ವ್ಯಾಪ್ತಿಗೆ ಬರಲಿದೆ. ವಿಷಯ ತಿಳಿಸಿದರೂ ಯಾವದೇ ಒಬ್ಬ ಅಧಿಕಾರಿಯೂ ಇತ್ತ ಸುಳಿದು ನೋಡಿಲ್ಲ ಎಂದು ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದರು.
ತಿತಿಮತಿ ಎಸಿಎಫ್ ಶ್ರೀಪತಿಯವರಿಗೆ ತಿಳಿಸಿದರೆ ಅವರು ಹುಲಿ ಓಡಾಡುವ ಸ್ಥಳದಲ್ಲಿ ಬೋನು ಹೊತ್ತು ತಿರುಗಾಡಲೂ ಸಾಧ್ಯವೇ ಎಂದು ಉದಾಸೀನದಿಂದ ಮಾತನಾಡುತ್ತಾರೆ ಎಂದು ಹಸುವಿನ ಮಾಲೀಕರು ಬೇಸರ ವ್ಯಕ್ತಪಡಿಸಿದರು.