ಮಡಿಕೇರಿ, ಮಾ. 16: ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶದ ಬಗ್ಗೆ ಸಚಿವರಿಗೆ ದೂರವಾಣಿ ಕರೆ ಮಾಡದಿರುವ ಬಗ್ಗೆ ಹಾಗೂ ಹಿರಿಯ ಅಧಿಕಾರಿಯ ಕರೆಯನ್ನು ಸ್ವೀಕರಿಸದ ಡಿ.ಸಿ.ಎಫ್. ಅವರ ಕಾರ್ಯವೈಖರಿ ಖಂಡಿಸಿ ಸಭೆಯನ್ನು ಬಹಿಷ್ಕರಿಸಿದ ಘಟನೆ ಮಡಿಕೇರಿಯ ಅರಣ್ಯ ಭವನದಲ್ಲಿ ಶುಕ್ರವಾರ ನಡೆಯಿತು.
ಕೊಡಗು ರೈತರ ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಮಡಿಕೇರಿಯ ಅರಣ್ಯ ಭವನದಲ್ಲಿ ಸಭೆ ನಡೆಸಲು ಸಿ.ಸಿ.ಎಫ್. ಅವರು ತಾ. 16ರಂದು ದಿನಾಂಕ ನಿಗದಿಪಡಿಸಿ ಸಭೆ ಆಯೋಜಿಸಿದ್ದರು. ಆದರೆ ಸಭೆಗೆ ಆಹ್ವಾನಿಸಿದ ಸಿ.ಸಿ.ಎಫ್. ಲಿಂಗರಾಜು ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕ ಸಂಘಟನೆಗಳು ಅಧಿಕಾರಿ ಮಾಹಿತಿ ನೀಡದೆ ದಿಢೀರನೆ ಗೈರು ಹಾಜರಾದ ಬಗ್ಗೆ ಡಿ.ಸಿ.ಎಫ್. ಮಂಜುನಾಥ್‍ರವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಅರಣ್ಯ ಭವನದ ಸಭಾಂಗಣದಲ್ಲಿ (ಮೊದಲ ಪುಟದಿಂದ) ರೈತರ ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಬೆಳೆಗಾರರೊಂದಿಗೆ ಮಡಿಕೇರಿ ವಿಭಾಗದ ಡಿ.ಸಿ.ಎಫ್. ಮಂಜುನಾಥ್ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಹಾಗೂ ಹೋರಾಟ ಸಮಿತಿ ಮುಖಂಡ ಸಂಕೇತ್ ಪೂವಯ್ಯ ಮಾತನಾಡಿ, ಜಿಲ್ಲೆಯಲ್ಲಿ 41 ಮಂದಿ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದು, ಕೋಟಿಗಟ್ಟಲೆ ಫಸಲು ನಷ್ಟವಾಗಿದ್ದು, ನೂರಾರು ಮಂದಿ ಶಾಶ್ವತ ಅಂಗವೈಫಲ್ಯದಿಂದ ಬಳಲುತ್ತಿದ್ದು, ಹಾಗೂ ನಿರಂತರವಾಗಿ ಆನೆ ಮಾನವ ಸಂಘರ್ಷ ನಡೆದರೂ ರಾಜ್ಯ ಅರಣ್ಯ ಸಚಿವರು ಜಿಲ್ಲೆಗೆ ಆಗಮಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ; ಮುಂದಿನ ಒಂದು ವಾರದೊಳಗೆ ಅರಣ್ಯ ಸಚಿವ ರಮಾನಾಥ್ ರೈ ಜಿಲ್ಲೆಗೆ ಭೇಟಿ ನೀಡಿ ಆನೆ - ಮಾನವ ಸಂಘರ್ಷಕ್ಕೆ ಶಾಶ್ವತ ಯೋಜನೆ ರೂಪಿಸದಿದ್ದಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಿಸುವದು ಹಾಗೂ ಅವರ ರಾಜೀನಾಮೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೂರಲಾಗುವದೆಂದು ಹೇಳಿದರು.
ಸಾಕಷ್ಟು ಮಂದಿ ರೈತರು ತಮ್ಮ ಜೀವನೋಪಾಯಕ್ಕಾಗಿ ಸಾಕಿದ ಜಾನುವಾರುಗಳನ್ನು ಹುಲಿ ಬಲಿ ತೆಗೆದುಕೊಂಡಿದ್ದು, ಅರಣ್ಯ ಇಲಾಖೆ ಕೇವಲ ರೂ. 10 ಸಾವಿರ ಪರಿಹಾರ ನೀಡಿ ಕೈತೊಳೆದು ಕೊಳ್ಳುತ್ತಿದ್ದು, ಕನಿಷ್ಟ ರೂ. 70 ಸಾವಿರ ನೀಡಬೇಕು; ಕಾಡಾನೆ ಧಾಳಿಗೆ ಸಿಲುಕಿದ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಶಾಶ್ವತ ಅಂಗವೈಫಲ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಪಡಿಸಿದರು.
ಕಾನೂನು ಸಲಹೆಗಾರ ಕೆ.ಬಿ. ಹೇಮಾಚಂದ್ರ ಮಾತನಾಡಿ, ಫೆ. 23ರಂದು ಅರಣ್ಯ ಭವನದ ಎದುರು ಸಮಿತಿಯ ವತಿಯಿಂದ ಹೋರಾಟ ನಡೆಸಿದ ಸಂದರ್ಭದಲ್ಲಿ ಸಿ.ಸಿ.ಎಫ್.ರವರು ನೀಡಿದ ಯಾವದೇ ಆಶ್ವಾಸನೆ ಈಡೇರಿಲ್ಲ. ಅಲ್ಲದೆ 3 ತಾಲೂಕುಗಳಲ್ಲಿ ಬೆಳೆಗಾರರನ್ನು, ಕಾರ್ಮಿಕರನ್ನು ಸೇರಿಸಿ ಸಭೆ ನಡೆಸುವದಾಗಿ ತಿಳಿಸಿ ನಂತರ ಯಾವದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಆಹ್ವಾನಿಸುವದಾಗಿ ತಿಳಿಸಿ ನಂತರ ಮಾಹಿತಿ ನೀಡಲಿಲ್ಲ ಎಂದರು. ಇಂದಿನ ಸಭೆಯ ಬಗ್ಗೆ 7 ದಿನಗಳ ಮುಂಚಿತವಾಗಿ ಪತ್ರದ ಮೂಲಕ ತಿಳಿಸಿದ್ದರೂ ಕೂಡ ಸಿ.ಸಿ.ಎಫ್.ರವರು ಗೈರು ಹಾಜರಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 3 ವರ್ಷಗಳ ಹಿಂದೆ ಕಾಡಾನೆ ಧಾಳಿಗೆ ಸಿಲುಕಿ ಅಂಗವೈಫಲ್ಯದಿಂದ ಬಳಲುತ್ತಿರುವ ಬಾಡಗ ಬಾಣಂಗಾಲ ಮಟ್ಟದ ಬಡ ಕಾರ್ಮಿಕ ಮಹಿಳೆ ಲಕ್ಷ್ಮಿಗೆ ಅರಣ್ಯ ಇಲಾಖೆ ಯಾವದೇ ಪರಿಹಾರಿ ನೀಡದೇ ವೈದ್ಯಕೀಯ ವೆಚ್ಚ ನೀಡದೇ ನಿರ್ಲಕ್ಷ್ಯ ವಹಿಸಿದ್ದು, ಲಕ್ಷ್ಮಿ ಅವರನ್ನು ಅರಣ್ಯ ಭವನಕ್ಕೆ ಕರೆದುಕೊಂಡು ಬಂದಿದ್ದು, ಇಲ್ಲೇ ಬಿಟ್ಟು ಹೋಗುತ್ತೇವೆ ಎಂದರು. ಇದರಿಂದ ವಿಚಲಿತರಾದ ಅಧಿಕಾರಿ ಲಕ್ಷ್ಮಿಗೆ ಪರಿಹಾರ ನೀಡುವದಾಗಿ ಒಪ್ಪಿಕೊಂಡರು. ಅಲ್ಲದೇ ಮುಂದಿನ ಒಂದು ವಾರದೊಳಗೆ ಪರಿಹಾರ ನೀಡದಿದ್ದಲ್ಲಿ ಲಕ್ಷ್ಮಿ ಅವರನ್ನು ಅರಣ್ಯ ಭವನದಲ್ಲೇ ಇರಿಸಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಫೆ. 23ರಂದು ಮಡಿಕೇರಿಯಲ್ಲಿ ಸಮಿತಿಯ ವತಿಯಿಂದ ಹೋರಾಟ ಮಾಡಿದರೂ ಕೂಡ ಸಿ.ಸಿ.ಎಫ್.ರವರು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಕಾರ್ಮಿಕ ರುದ್ರಪ್ಪ ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆ ಇತ್ತೀಚೆಗೆ ರುದ್ರಪ್ಪನವರು ಸಾವನ್ನಪ್ಪಿದ ಸಂದರ್ಭ ರಾತ್ರೋರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ ವಿಚಾರ ಮುಚ್ಚಿಟ್ಟಿದ್ದಾರೆಂದು ಆರೋಪಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಿಮ್ಮಂಗಡ ಗಣೇಶ್ ಮಾತನಾಡಿ ಅರಣ್ಯ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಸಭೆಗಳನ್ನು ಆಯಾ ವಲಯ ಮಟ್ಟದಲ್ಲಿ ನಡೆಸಬೇಕು ಎಂದರು.
ರೈತ ಸಂಘದ ಮುಖಂಡ ಸುಜಯ್ ಬೋಪಯ್ಯ ಮಾತನಾಡಿ, ಅರಣ್ಯ ಪ್ರದೇಶದೊಳಗೆ ಅರಣ್ಯಾಧಿಕಾರಿಗಳ ಕುಮ್ಮಕ್ಕಿನಿಂದ ಮೋಜು ಮಸ್ತಿಗೆ ಬರುವವರಿಂದ ಕಾಡ್ಗಿಚ್ಚು ಹರಡುತ್ತಿದೆ. ಇಲಾಖಾಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ದೂರಿದರು. ಅರಣ್ಯ ಸಚಿವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಿ ಎಂದು ಡಿ.ಸಿ.ಎಫ್. ಮಂಜುನಾಥ್ ಅವರನ್ನು ಒತ್ತಾಯಿಸಿದರು. ಈ ಸಂದರ್ಭ ಹೋರಾಟ ಸಮಿತಿಯ ಸಂಚಾಲಕ ಪ್ರವೀಣ್ ಬೋಪಯ್ಯನವರು ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿರವರಿಗೆ ಕರೆ ಮಾಡಿ ಡಿ.ಸಿ.ಎಫ್. ಅವರನ್ನು ಮಾತನಾಡಲು ಒತ್ತಾಯಿಸಿದರು.
ಮೇಲಾಧಿಕಾರಿಗಳೊಂದಿಗೆ ತನಗೆ ಮಾತನಾಡುವ ಅಧಿಕಾರವಿಲ್ಲ, ಸಚಿವರ ಬಳಿಯೂ ಕೂಡ ಮಾತನಾಡುವ ಅಧಿಕಾರವಿಲ್ಲ ಎಂದು ಡಿ.ಸಿ.ಎಫ್. ತಿಳಿಸಿದಾಗ ಬೆಳೆಗಾರರು ಹಾಗೂ ಸಮಿತಿಯವರು ಡಿ.ಸಿ.ಎಫ್.ರವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭ ಪಿ.ಆರ್. ಭರತ್ ಮಾತನಾಡಿ, ಅಧಿಕಾರಿಗೆ ಸಮಸ್ಯೆ ಬಗೆಹರಿಸುವ ಕಾಳಜಿ ಇಲ್ಲ; ಈ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸುವದೇ ಸೂಕ್ತ ಎಂದರು. ಕೂಡಲೇ ಅರಣ್ಯ ಭವನದ ಕಚೇರಿ ಒಳಗೆ ಧಿಕ್ಕಾರ ಕೂಗಿದ ಸಮಿತಿ ಯವರು ಸಭೆಯನ್ನು ಬಹಿಷ್ಕರಿಸಿದರು.
ಹೋರಾಟ ಸಮಿತಿಯ ಪದಾಧಿಕಾರಿಗಳಾದ ಕಂಬೀರಂಡ ನಂದಾ ಗಣಪತಿ, ರಾಯ್ ಕರುಂಬಯ್ಯ, ಕೊಂಗೇರ ಗಪ್ಪಣ್ಣ, ಪಾಂಡಂಡ ರಾಜ ಗಣಪತಿ, ಪಿ.ಆರ್. ಭರತ್, ರೈತ ಸಂಘದ ಮುಖಂಡರಾದ ಚೋನಿರ ಸತ್ಯ, ಅಯ್ಯಮಡ ಹ್ಯಾರಿ, ಬಾಚಮಂಡ ನಂಜಪ್ಪ, ತಿತೀರಮಾಡ ಸುನೀಲ್, ಚೆಪ್ಪುಡೀರ ಸತೀಶ್ ಇನ್ನಿತರರು ಹಾಜರಿದ್ದರು. ರೈತ ಕಾರ್ಮಿಕ ಅರಣ್ಯ ಹೋರಾಟ ಸಮಿತಿಯ ಸಂಚಾಲಕ ಪ್ರವೀಣ್ ಬೋಪಯ್ಯ ನೇತೃತ್ವ ವಹಿಸಿದ್ದರು. ಸಭೆ ನಂತರ ಸಮಿತಿ ಎಸ್.ಪಿ. ಅವರನ್ನು ಭೇಟಿ ಮಾಡಿದರು.
ಚಿತ್ರ ವರದಿ : ವಾಸು