ಸೋಮವಾರಪೇಟೆ, ಮಾ. 17: ಸೋಮವಾರಪೇಟೆ ಪಟ್ಟಣದ ಮಟ್ಟಿಗೆ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಶುಭಕಾರ್ಯಗಳಿಗೆ ಜಲಧಾರಿಣಿ ಯಾಗಿದ್ದ ಆನೆಕೆರೆಗೆ ಕಾಯಕಲ್ಪ ನೀಡಲು ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ಎನ್. ರವೀಂದ್ರ ಅವರು ಮುಂದಾಗಿದ್ದು, ಯಡೂರು ಕೆರೆಯ ನಂತರ ಪಟ್ಟಣದ ಆನೆಕೆರೆಗೆ ಪುನರುಜ್ಜೀವ ನೀಡಲು ಕೈಹಾಕಿದ್ದಾರೆ. ಇದರೊಂದಿಗೆ ತಾಲೂಕಿನ ಇನ್ನೂ ಹಲವಾರು ಕೆರೆಗಳ ಹೂಳೆತ್ತಲು ಈ ಉದ್ಯಮಿ ಮುಂದಾಗಿದ್ದು, ಸಾರ್ವಜನಿಕರಿಂದ ಆಧುನಿಕ ಭಗೀರಥ ಎಂದೇ ಕರೆಸಿಕೊಳ್ಳುತ್ತಿದ್ದಾರೆ.ಯಡೂರು ಗ್ರಾಮದಲ್ಲಿ ಬತ್ತಿದ್ದ ಸುಮಾರು ಎರಡೂವರೆ ಎಕರೆ ವಿಸ್ತಾರದ ವಿಶಾಲ ಕೆರೆಯನ್ನು ಹೂಳೆತ್ತಲು 8.50ಲಕ್ಷಕ್ಕೂ ಅಧಿಕ ಹಣ ವಿನಿಯೋಗಿಸಿರುವ ಹರಪಳ್ಳಿ ರವೀಂದ್ರ ಅವರು, ಇದೀಗ ಪಟ್ಟಣದ ಆನೆಕೆರೆಯ ಹೂಳೆತ್ತಲು ತಮ್ಮ ಸ್ವಂತ ದುಡಿಮೆಯ ಹಣವನ್ನು ಬಳಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸೋಮವಾರಪೇಟೆಯ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ನಗರ ಗೌಡ ಒಕ್ಕೂಟದ
(ಮೊದಲ ಪುಟದಿಂದ) ಸದಸ್ಯರು ಕೈ ಜೋಡಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆನೆಕೆರೆ, ಕಳೆದ ಎರಡು ದಶಕಗಳಿಂದ ಬತ್ತಿಹೋಗಿತ್ತು. ಮಳೆಗಾಲದಲ್ಲಿ ಮಾತ್ರ ನೀರು ತುಂಬುತ್ತಿದ್ದ ಆನೆಕೆರೆಯಲ್ಲಿ ನಂತರ ಹನಿ ನೀರೂ ಇಲ್ಲವಾಗುತ್ತಿತ್ತು. ಜಾನುವಾರುಗಳಿಗಿರಲಿ.., ಗೌರಿ-ಗಣಪತಿ ಮೂರ್ತಿಗಳನ್ನು ವಿಸರ್ಜಿಸಲೂ ಸಹ ನೀರಿನ ಕೊರತೆ ಎದುರಾಗುತ್ತಿತ್ತು.
ಈ ಬಗ್ಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯವರು ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆಸಿದ್ದರೇ ವಿನಃ ಕಾಯಕಲ್ಪಕ್ಕೆ ಯಾವದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ಆನೆಕೆರೆಯಲ್ಲಿ ಹೂಳು ತುಂಬಿ, ತ್ಯಾಜ್ಯಗಳನ್ನು ಸಂಗ್ರಹಿಸುವ ತಾಣವಾಗಿ ಮಾರ್ಪಟ್ಟಿತ್ತು.
ಹೀಗಿದ್ದ ಆನೆಕೆರೆಯನ್ನು ಹೂಳೆತ್ತುವ ನಿರ್ಧಾರಕ್ಕೆ ಬಂದ ಮೂಲತಃ ಸೋಮವಾರಪೇಟೆಯ ಹರಪಳ್ಳಿ ಗ್ರಾಮದವರು, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹೆಚ್.ಎನ್. ರವೀಂದ್ರ ಅವರು, ಇಂದು ಕಾಯಕಲ್ಪ ಕಾರ್ಯಕ್ಕೆ ಚಾಲನೆ ನೀಡಿದರು.
ಬತ್ತಿದ್ದ ಕೆರೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ಹೂಳೆತ್ತುವ ಕಾರ್ಯಕ್ಕೆ ಮುನ್ನುಡಿ ಬರೆದ ರವೀಂದ್ರ ಅವರು ಮಾತನಾಡಿ, ಕೆರೆಗಳ ಪುನರುಜ್ಜೀವದಿಂದ ಮಾತ್ರ ಮಾನವ ಕುಲದ ಅಸ್ತಿತ್ವ ಸಾಧ್ಯ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವದರಿಂದ ಕೆರೆಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ. ಈ ನಿಟ್ಟಿನಲ್ಲಿ ತಾನು ತನ್ನ ಸ್ವಂತ ದುಡಿಮೆಯಿಂದ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಹಣ ವಿನಿಯೋಗಿಸುತ್ತಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಅಬ್ಬೂರುಕಟ್ಟೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ನೀಗಿಸುವ ಚಿಂತನೆಯಿದೆ. ಒಬ್ಬನಿಂದಲೇ ಎಲ್ಲವೂ ಸಾಧ್ಯವಿಲ್ಲ; ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಸಿ.ಸಿ. ನಂದಕುಮಾರ್ ಮಾತನಾಡಿ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಹರಪಳ್ಳಿ ರವೀಂದ್ರ ಮಾಡಿದ್ದಾರೆ. ಆನೆಕೆರೆಗೆ ಕಾಯಕಲ್ಪ ನೀಡುವದು ಈ ಭಾಗದ ಸಾರ್ವಜನಿಕರ ದಶಕಗಳ ಬೇಡಿಕೆಯಾಗಿತ್ತು ಎಂದರು
ಈ ಸಂದರ್ಭ ನಗರ ಗೌಡ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಬನ್ನಳ್ಳಿ ಗೋಪಾಲ್, ಮೋಟಾರ್ ಯೂನಿಯನ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಪದಾಧಿಕಾರಿಗಳಾದ ಖಾದರ್, ಪರಮೇಶ್, ಹಾಲಪ್ಪ, ಶೇಷಪ್ಪ, ಚೌಡ್ಲು ವಿಎಸ್‍ಎಸ್‍ಎನ್ ನಿರ್ದೇಶಕಿ ಜಾನಕಿ ವೆಂಕಟೇಶ್, ಆಟೋ ಯೂನಿಯನ್ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಗಂಗಾಧರ್, ಮೊಗೇರ ಸಮಾಜದ ಅಧ್ಯಕ್ಷ ದಾಮೋಧರ್, ಚೌಡ್ಲು ಗ್ರಾ.ಪಂ. ಸದಸ್ಯ ನತೀಶ್ ಮಂದಣ್ಣ, ಡಾಲ್ಪೀನ್ಸ್ ಕ್ಲಬ್‍ನ ಅಭಿಷೇಕ್ ಗೋವಿಂದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಆನೆಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು, ಸಿಬ್ಬಂದಿಗಳು ಸೇರಿದಂತೆ ಸದಸ್ಯರುಗಳು ಗೈರಾಗಿದ್ದರು. ಸಾಮಾನ್ಯ ಸಭೆಯ ಚರ್ಚೆಯಲ್ಲಿ ಕೆರೆಯ ಬಗ್ಗೆ ತೋರಿದ ಕಾಳಜಿ ಇಂದು ಕಂಡುಬರಲಿಲ್ಲ. ಈ ಬಗ್ಗೆ ಸಾರ್ವಜನಿಕರು ಪಂಚಾಯಿತಿಯ ಕ್ರಮದ ವಿರುದ್ಧ ಸ್ಥಳದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.