ಮಡಿಕೇರಿ, ಮಾ. 19: ಕಳೆದ ಜನವರಿ 31 ರಂದು ಕೂಟುಹೊಳೆಯಲ್ಲಿ ಶವ ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಪೋಷಕರು ಇಂದು ಡಿವೈಎಸ್‍ಪಿ ಸುಂದರರಾಜ್ ಅವರನ್ನು ವಕೀಲ ಮನೋಜ್ ಬೋಪಯ್ಯ ನೇತೃತ್ವದಲ್ಲಿ ಭೇಟಿ ಮಾಡಿ ಶವದ ಮರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿ ಮೂರು ದಿನಗಳ ಗಡುವು ನೀಡಿದ್ದಾರೆ.
ಮೊಣ್ಣಂಗೇರಿಯ ನಿವಾಸಿ ಯಾಲದಾಳು ಪ್ರಭು ಎಂಬವರ ಶವ ಜನವರಿ 31 ರಂದು ಕೂಟುಹೊಳೆ ಯಲ್ಲಿ ಪತ್ತೆಯಾಗಿತ್ತು. ಪ್ರಭು ಈಜಲು ತೆರಳಿ ಸಾವನ್ನಪ್ಪಿರುವದಾಗಿ ಆತನ ಜೊತೆ ಪಾರ್ಟಿ ಮಾಡಿದ್ದ ಸ್ನೇಹಿತರು ಪೊಲೀಸ್ ದೂರು ನೀಡಿದ್ದರು. ಆದರೆ ಇದೊಂದು ಕೊಲೆ ಎಂದು ಮೃತನ ಪೋಷಕರು ದೂರು ನೀಡಿದ್ದರೂ ಪೊಲೀಸರು ನಿರಾಕರಿಸಿದ್ದರಿಂದ ವಕೀಲ ಡಾ. ಮನೋಜ್ ಬೋಪಯ್ಯ ಅವರ ಮೂಲಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಿತ್ತು.
ಆದರೆ ಪೊಲೀಸ್ ತನಿಖೆ ಬಿರುಸುಗೊಂಡಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಇಂದು ಮೃತ ಪ್ರಭುವಿನ ಪೋಷಕರು ಡಿವೈಎಸ್‍ಪಿ ಸುಂದರರಾಜ್ ಅವರನ್ನು ಭೇಟಿ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್‍ಪಿ, ಪ್ರಕರಣ ತನಿಖಾ ಹಂತದಲ್ಲಿದ್ದು, ಸೂಕ್ತ ಸಾಕ್ಷಾಧಾರಗಳನ್ನು ಕಲೆ ಹಾಕಲಾಗುತ್ತಿದೆ. ಸಾಕ್ಷಾಧಾರಗಳು ದೊರೆತ ತಕ್ಷಣ ಆರೋಪಿಗಳನ್ನು ಬಂಧಿಸಲಾಗುವದು ಎಂದು ಹೇಳಿದರು.
ಶವದ ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ತಮಗೆ ಸಂಶಯವಿದ್ದು, ಶವವನ್ನು ಮರು ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು ಎಂದು ಪೋಷಕರು ಒತ್ತಾಯಿಸಿದರು. ಮೂರು ದಿನದೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವದಾಗಿ ಡಿವೈಎಸ್‍ಪಿ ಸುಂದರರಾಜ್ ಭರವಸೆಯಿತ್ತರು.