ಕೆ.ಪಿ.ಬಿ. ವೀರಾಜಪೇಟೆ, ಮಾ. 16: ಭಾಷೆಯನ್ನು ಸಂವೇದ ನಾಶೀಲವಾಗಿ ಬಳಸುವದೇ ಸಾಹಿತ್ಯ. ವಿದ್ಯಾರ್ಥಿ ಜೀವನದಲ್ಲಿ ಎಡವುದು ಸಹಜ. ಆದರೆ ನಿರಂತರ ಬರವಣಿಗೆಯ ಪ್ರಯತ್ನದಿಂದ ಪರಿಪೂರ್ಣವಾದ ಕವಿಗಳಾಗಲು ಸಾಧ್ಯ ಎಂದು ಸಾಹಿತಿ ಹಾಗೂ ವಕೀಲ ಬಾಲಸುಬ್ರಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು.ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಾಣ-ಜಾಣೆಯರ ಬಳಗ 2017-18ರ ‘ಯುವ ಕಾವ್ಯ ಯಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಗಳು ಜೀವನದಲ್ಲಿ ಕಾಲಹರಣ ಮಾಡದೇ ಪುಸ್ತಕದ ಕಡೆಗೆ ಗಮನಹರಿಸಿ ತಮ್ಮ ಬರವಣಿಗೆ ಯನ್ನು ಕಾವ್ಯಗಳ ಕಡೆಗೆ ಹೆಚ್ಚಿಸಿಕೊಳ್ಳಬೇಕು ಎಂದರು. ಮಹಿಳಾ ಬರಹಗಾರ್ತಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಕಾವ್ಯದ ಶಕ್ತಿ ಕುಂದುತ್ತಿದೆ. ಯಾವದೇ ಕತೆಯನ್ನು ಬರೆಯುವಾಗ ಓದುಗರಿಗೆ ಹಿತವನ್ನುಂಟು ಮಾಡುವಂತ ಕತೆಗಳನ್ನು ಬರೆಯಬೇಕು ಎಂದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ಕೆ. ಉಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್. ರಘುರಾಜ್. ಅತಿಥಿ ಉಪನ್ಯಾಸಕರುಗಳಾದ ಧರ್ಮಶೀಲ, ಕೆ. ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು. ರಘುರಾಜ್ ಸ್ವಾಗತಿಸಿದರು. ಪೂರ್ಣಿಮಾ ಮತ್ತು ಬಿ.ಎಸ್. ಜಯಶ್ರೀ ನಿರೂಪಿಸಿದರೆ, ಧರ್ಮಶೀಲ ವಂದಿಸಿದರು.