ಶ್ರೀಮಂಗಲ, ಮಾ. 15: ವೀರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿರುವ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರಿಗೆ ವಿಧಾನ ಸಭಾ ಅಭ್ಯರ್ಥಿಯ ಟಿಕೆಟ್‍ನ್ನು ಪಕ್ಷ ನೀಡಲು ನಿರ್ಣಯ ಕೈಗೊಂಡು ಪಕ್ಷದ ರಾಷ್ಟ್ರ, ರಾಜ್ಯ, ಜಿಲ್ಲಾಧ್ಯಕ್ಷರುಗಳಿಗೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಈ ವಿಚಾರದಲ್ಲಿ ಯಾವದೇ ರಾಜಿ ಮಾಡಿಕೊಳ್ಳದಿರಲು ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಗೋಣಿಕೊಪ್ಪ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಪಕ್ಷದ ಮುಖಂಡ ಪೊನ್ನಿಮಾಡ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಕ್ಷೇತ್ರದ 40 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡ ಸಭೆಯಲ್ಲಿ ಪ್ರಮುಖರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಲ್ಲಮಾಡ ಪ್ರಭು ಪೂಣಚ್ಚ ಮಾತನಾಡಿ, ವೀರಾಜಪೇಟೆ ತಾಲೂಕು ಕಳೆದ 65 ವರ್ಷದಿಂದ ಸ್ಥಳೀಯ ಮತದಾನ ಹಕ್ಕು ಹೊಂದಿರುವ ಕಾರ್ಯಕರ್ತರಿಗೆ ಶಾಸಕರಾಗಲು ಅವಕಾಶ ದೊರೆತಿಲ್ಲ. ವೀರಾಜಪೇಟೆ ಕ್ಷೇತ್ರ ಕೊಡಗು ರಾಜ್ಯ ವಿಲೀನದ ನಂತರ ಮೀಸಲು ಕ್ಷೇತ್ರವಾಗಿ ಸ್ಥಳೀಯರು ಶಾಸಕರಾಗುವ ಅವಕಾಶ ವಂಚಿತವಾಯಿತು. 2008ರ ನಂತರ ಕ್ಷೇತ್ರ ಪುನರ್‍ವಿಂಗಡಣೆಯಾದ ನಂತರವೂ ತಾಲೂಕಿನ ಹೊರಗಿ ನವರು ಶಾಸಕರಾಗುವಂತೆ ಆಗಿದೆ. ಇದರಿಂದ ಸ್ಥಳೀಯ ಜ್ವಲ್ವಂತ ಸಮಸ್ಯೆಗಳ ಪರಿಹಾರಕ್ಕೆ ಹೊರಗಿನಿಂದ ಬಂದು ಆಯ್ಕೆಯಾಗಿರುವ ಶಾಸಕರಿಂದ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಆದ್ದರಿಂದ ಸ್ಥಳೀಯ ಸಮಸ್ಯೆಗಳಿಗೆ ಪ್ರಾಮಾಣಿಕ ಕಾಳಜಿ ತೋರುವ ತಾಲೂಕು ವ್ಯಾಪ್ತಿಯ ಪಕ್ಷದ ಕಾರ್ಯ ಕರ್ತರಿಗೆ ಅಭ್ಯರ್ಥಿಯಾಗಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಬಿರುನಾಣಿ ಗ್ರಾ.ಪಂ. ಸದಸ್ಯ ಕಾಯಪಂಡ ಸುನಿಲ್ ಮಾತನಾಡಿ, ಈ ಭಾಗದ ಬಹುಕಾಲದ ಬೇಡಿಕೆ ಯಾದ ಪೊನ್ನಂಪೇಟೆ ತಾಲೂಕು ರಚನೆ, ಅಲ್ಲದೆ ನೆನಗುದಿಗೆ ಬಿದ್ದಿರುವ ಕೂಟಿಯಾಲ ರಸ್ತೆ ಜೋಡಣೆಗೆ ಗಮನ ಹರಿಸುತ್ತಿಲ್ಲ ಆದ್ದರಿಂದ ತಾಲೂಕಿನ ಬಗ್ಗೆ ನೈಜ್ಯ ಕಾಳಜಿ ಇರುವ ಪಕ್ಷದ ಸಕ್ರಿಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.

ಚೊಟ್ರುಮಾಡ ಕಾಶಿ ತಮ್ಮಯ್ಯ ಅವರು ಜಿಲ್ಲೆಯಲ್ಲಿ ಬಿ.ಜೆ.ಪಿ. ಪಕ್ಷ ವನ್ನು ಕಟ್ಟಿ ಬೆಳೆಸಿದ ಹಿರಿಯರಿಗೆ ಬೆಲೆ ಇಲ್ಲದಂತಾಗಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ. ಕೊಡಗಿನ ಸಮಸ್ಯೆ ಗಳನ್ನು ಪರಿಹರಿಸುವತ್ತ ಜನ ಪ್ರತಿನಿಧಿಗಳಿಗೆ ಕಾಳಜಿ ಇಲ್ಲ ಎಂದು ದೂರಿದರು.

ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಜಿಲ್ಲೆಯ ಬೆಳೆಗಾರರು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕರಿಮೆಣಸು ಅಮದಿನಿಂದ ದರ ಶೇಕಡಾ 60 ರಷ್ಟು ಕುಸಿದಿದೆ. ಹವಾಮಾನ ವೈಪರೀತ್ಯ ದಿಂದ ಫಸಲು ಕುಸಿದಿದ್ದು, ಇನ್ನೊಂದು ಕಡೆ ಮಾರುಕಟ್ಟೆ ಸಹ ಕುಸಿದಿದೆ. ಹಲವು ವರ್ಷಗಳಿಂದ ಬರಗಾÀಲದ ಸ್ಥಿತಿಯಿಂದ ಬೆಳೆಗಾರರು ಕಂಗಲಾಗಿದ್ದಾರೆ. ಯಾವ ಸಮಸ್ಯೆಗೂ ನಮ್ಮ ಶಾಸಕರು ಹಾಗೂ ಸಂಸದರು ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಗುಡಿಯಂಗಡ ನಾಚಪ್ಪ ಮಾತನಾಡಿ, ಪ್ರತಿ ಸಮಸ್ಯೆಗೆ ಸ್ಪಂದಿಸುವ ಪಕ್ಷ ಮುಖಂಡ ಎಂ.ಎಂ. ರವೀಂದ್ರ ಅವರಿಗೆ ಟಿಕೆಟ್ ನೀಡಿದರೆ ಅತ್ಯಧಿಕ ಮತದಿಂದ ಗೆಲ್ಲಲು ಸಾಧ್ಯವಿದೆ ಎಂದು ತಮ್ಮ ನಿಲುವು ವ್ಯಕ್ತಪಡಿಸಿದರು. ಪಕ್ಷ ಇದಕ್ಕೆ ಅವಕಾಶ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯನ್ನು ನಿಲ್ಲಿಸುವ ಇಂಗಿತ ವ್ಯಕ್ತಪಡಿಸಿದರು.

ಚೊಟ್ಟೆಯಂಡಮಾಡ ಡಿ. ಮಾದಪ್ಪ ಮಾತನಾಡಿ, ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಬಿ.ಜೆ.ಪಿ. ಪರಿವರ್ತನಾ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪರವರು ಕೊಡಗಿನ ಎರಡು ಕ್ಷೇತ್ರಗಳಿಗೆ ಹಾಲಿ ಶಾಸಕರುಗಳ ಹೆಸರನ್ನು ಹೇಳಿದ್ದಾರೆ. ಆದರೆ ಕೊಡಗು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಗೊಂದಲ ಗೊಳ್ಳುವ ಅವಶ್ಯಕತೆ ಇಲ್ಲ. ಅದರಲ್ಲೂ ವೀರಾಜಪೇಟೆ ಕ್ಷೇತ್ರಕ್ಕೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿರುವ ಅಭ್ಯರ್ಥಿಯನ್ನೇ ಪಕ್ಷ ಆಯ್ಕೆ ಮಾಡಬೇಕು. ಇದರಲ್ಲಿ ಪಕ್ಷದ ಯಾವುದೇ ಒತ್ತಡಕ್ಕೆ ಮಣಿದು ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಹೇಳಿದರು.

ಆಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಿಮಾಡ ಸುರೇಶ್ ಅವರು ಕಳೆದ ಹಲವು ದಶಕದಿಂದ ತನ್ನದೇ ಅಭ್ಯರ್ಥಿಯನ್ನು ಹೊಂದಲು ವಂಚಿತವಾಗಿರುವ ವೀರಾಜಪೇಟೆ ತಾಲೂಕಿನಾದ್ಯಂತ ಸಮಸ್ಯೆಯ ಸರಮಾಲೆ ಇದೆ. ಇದಲ್ಲದೆ ಹಲವಾರು ಮಾರಕ ಯೋಜನೆಗಳು ರೂಪಿಸುವ ಆತಂಕ ಎದುರಾಗಿದೆ. 65 ವರ್ಷ ದಿಂದ ತಾಲೂಕು ವ್ಯಾಪ್ತಿಯ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರಿಗೆ ಒಬ್ಬ ಶಾಸಕನಾಗುವ ಅರ್ಹತೆ ಇಲ್ಲವೆ? ಎಂದು ಪ್ರಶ್ನಿಸಿದರು

ವೇದಿಕೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ನಾಮೇರ ನಂಜಪ್ಪ, ಚೆನ್ನಯ್ಯನಕೋಟೆಯ ಉದಯ, ಬಿದ್ದಾಟಂಡ ರೋಜಿ ಚಿಣ್ಣಪ್ಪ, ತಿತಿಮತಿಯ ರವಿ, ರಜನಿ, ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾ ಉಪಾಧ್ಯಕ್ಷ ಮತ್ರಂಡ ಪ್ರವೀಣ್ ಹಾಜರಿದ್ದರು. ಸಭೆಯಲ್ಲಿ ಸುಮಾರು 250ಕ್ಕೂ ಆಧಿಕ ಕಾರ್ಯಕರ್ತರು ಭಾಗವಹಿಸುವ ಮೂಲಕ ವೀರಾಜಪೇಟೆ ತಾಲೂಕಿನ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರಿಗೆ ಟಿಕೆಟ್ ನೀಡಬೇಕು ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆಯನ್ನು ನೀಡುವ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.