ಪೊನ್ನಂಪೇಟೆ, ಮಾ. 15: ಗ್ರಾಮದ ನೂರಾರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನೂಕೂಲ ಕ್ಕಾಗಿ ಗ್ರಾಮದಲ್ಲೆ ಸರಕಾರಿ ಪ್ರೌಢಶಾಲೆ ಆರಂಭಿಸಬೇಕೆಂಬದು ಬೇಟೋಳಿ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದೆ. ಈ ಕುರಿತು ಗ್ರಾಮದ ಕೆಲ ವಿದ್ಯಾಭಿಮಾನಿಗಳು ಸರಕಾರದ ಉನ್ನತ ಮಟ್ಟಕ್ಕೆ ಕೊಂಡೊಯ್ದು ಸಂಬಂಧಿಸಿದವರ ಗಮನ ಸೆಳೆದರೂ ಈ ಬೇಡಿಕೆ ಈಡೇರಿರಲಿಲ್ಲ. ಇದೀಗ ಗ್ರಾಮದ ಕೆಲ ಪ್ರಮುಖರು ಮತ್ತೊಮ್ಮೆ ಸರಕಾರದ ಮುಂದೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಬೇಟೋಳಿಗೆ ಈ ವರ್ಷವಾದರೂ ಸರ್ಕಾರಿ ಪ್ರೌಢ ಶಾಲೆಯೊಂದು ಮಂಜೂರಾಗುವದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ವೀರಾಜಪೇಟೆ ತಾಲೂಕಿನ ಕುಗ್ರಾಮಗಳ ಪೈಕಿ ಒಂದಾದ ಬೇಟೋಳಿ (ಗುಂಡಿಕೆರೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವೀರಾಜಪೇಟೆ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿದೆ. 1954 ರಲ್ಲಿ ಪ್ರಾರಂಭಗೊಂಡ ಈ ಶಾಲೆಯಲ್ಲಿ ಹಾಲಿ 1 ರಿಂದ 8 ರವರೆಗೆ ತರಗತಿಗಳು ನಡೆಯುತ್ತಿವೆ. ಇಲ್ಲಿ 9 ಮತ್ತು 10ನೇ ತರಗತಿಯ ಪ್ರೌಢಶಾಲೆ ಇಲ್ಲದೆ ಇರುವದರಿಂದ ಇಲ್ಲಿನ ಮಕ್ಕಳು 8ನೇ ತರಗತಿವರೆಗೆ ಓದಿ ಅಷ್ಟಕ್ಕೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾರೆ. ಇಲ್ಲಿನ ವಿದ್ಯಾಥಿಗಳು ಪ್ರೌಢಶಾಲೆಗೆ ಸೇರಬೇಕಾದರೆ 10 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿ ವೀರಾಜಪೇಟೆ ಪಟ್ಟಣಕ್ಕೆ ತೆರಳ ಬೇಕಾಗಿರುವದು ಇದಕ್ಕೆ ಪ್ರಮುಖ ಕಾರಣವೆನ್ನಲಾಗಿದೆ. ಈ ಗ್ರಾಮದಿಂದ ವೀರಾಜಪೇಟೆಗೆ ಸಾರಿಗೆ ಸೌಕರ್ಯವೂ ಇಲ್ಲದ ಪರಿಸ್ಥಿತಿಯಲ್ಲಿ ದಿನನಿತ್ಯ ಕಿ.ಮೀ. ಗಟ್ಟಲೆ ಕಾಲ್ನಡಿಗೆಯಲ್ಲಿ ನಡೆಯ ಬೇಕಾದ ಮಕ್ಕಳ ದುಃಸ್ಥಿತಿಯನ್ನು ನೆನೆದು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನೇ ನಿಲ್ಲಿಸುತ್ತಿದ್ದಾರೆ.
ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಪದಾಧಿಕಾರಿಗಳ ವಿಶೇಷ ಆಸಕ್ತಿಯಿಂದ ಈ ಶಾಲೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಾವದೇ ರೀತಿಯಲ್ಲೂ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿದ್ದಾರೆ. ಇಲಿನ ಶಿಕ್ಷಕರು ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯ ವಿದ್ಯಾಭಿಮಾನಿಗಳು, ಇಷ್ಟೆಲ್ಲಾ ಸಕಾರಾತ್ಮಕ ಗುಣಾಂಶಗಳಿದ್ದರೂ ಬೇಟೋಳಿ ಗ್ರಾಮದಲ್ಲಿ ಪ್ರೌಢ ತರಗತಿಯನ್ನು ಆರಂಭಿಸಲು ಸರಕಾರ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಶೇ. 90 ರಷ್ಟು ಅಲ್ಪ ಸಂಖ್ಯಾತರೇ ಇರುವ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೇ. 100 ರಷ್ಟು ದಾಖಲಾತಿ ಹಾಜರಾತಿ ಇರುವದು ಅತ್ಯಂತ ಗಮನಾರ್ಹ ವಿಷಯ. ಆದರೂ ಇಲ್ಲಿ ಪ್ರೌಢ ಶಾಲೆಯನ್ನು ಆರಂಭಿಸಲು ಅನುಮತಿ ನೀಡುವದಕ್ಕೆ ಸರ್ಕಾರ ಮೀನಾಮೇಷ ಎಣಿಸಿ ಹಿಂದೇಟು ಹಾಕುತ್ತಿರುವದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಲೆಯ ಬಗ್ಗೆ ದೂರದೃಷ್ಟಿ ಹೊಂದಿರುವ ಎಸ್.ಡಿ.ಎಂ.ಸಿ. ಸಮಿತಿಯು ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕಾಗಿ ಕಳೆದ ಸಾಲಿನಿಂದ ಶಾಲೆಯ ಒತ್ತಿನಲ್ಲಿಯೇ ಆಂಗ್ಲ ಮಾಧ್ಯಮದ ಸರ್ಕಾರಿ ಪೂರ್ವ ಪ್ರಾಥಮಿಕ ತರಗತಿ (ನರ್ಸರಿ)ಯನ್ನು ಆರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿ 18 ಮಕ್ಕಳು ದಾಖಲಾಗಿದ್ದು, ಪ್ರತಿಯೊಂದು ಮಗುವಿಗೂ ಖಾಸಗಿ ಶಾಲೆಗಳಲ್ಲಿ ಧರಿಸುವಂತೆ ಪರಿಪೂರ್ಣ ಸಮವಸ್ತ್ರವನ್ನು ಒದಗಿಸಲಾಗಿದೆ.
2015-16ನೇ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಗೆ 9ನೇ ತರಗತಿಯನ್ನು ಆರಂಭಿಸಲು ವಿಶೇಷ ಅನುಮತಿ ನೀಡಬೇಕೆಂದು ಶಾಲಾ ಎಸ್‍ಡಿಎಂಸಿ ವತಿಯಿಂದ ಕ್ರಮವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು ಮತ್ತು ಪ್ರೌಢಶಾಲಾ ನಿರ್ದೇಶಕರ ಮೂಲಕ ಅಂದಿನ ರಾಜ್ಯ ಶಿಕ್ಷಣ ಮಂತ್ರಿಗಳಾಗಿದ್ದ ಕಿಮ್ಮನೆ ರತ್ನಾಕರ ಅವರಿಗೆ ಮನವಿ ಸಲ್ಲಿಸಲಾಗಿತ್ತು, ಈ ಬಗ್ಗೆ ಸ್ಪಂದಿಸಿದ್ದ ಕಿಮ್ಮನೆ ರತ್ನಾಕರ ಅವರು, ಕಡತಗಳನ್ನು ಪರಿಶೀಲಿಸಿ ಬೇಟೋಳಿಗೆ ಪ್ರೌಢಶಾಲೆ ಅಗತ್ಯ ವಿರುವದರಿಂದ ತುರ್ತಾಗಿ ಇಲ್ಲಿ ಪ್ರೌಢಶಾಲೆ ಆರಂಭಿಸಲು ಅನುಮತಿ ನೀಡಬೇಕೆಂಬ ಶಿಫಾರಸ್ಸಿನೊಂದಿಗೆ ಅಂತಿಮ ಆದೇಶಕ್ಕಾಗಿ ಸರಕಾರದ ಉನ್ನತ ಮಟ್ಟದ ಸಮಿತಿಗೆ ಕಳುಹಿಸಿದರು. ಆದರೆ ಆದೇಶದ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ಕೊನೆ ಗಳಿಗೆಯಲ್ಲಿ ಅನುಮತಿ ನಿರಾಕರಣೆ ಯಾದಾಗ ನಿರಾಸೆ ಅನುಭವಿಸ ಬೇಕಾಯಿತು ಎಂಬದು ಇಲ್ಲಿನ ಗ್ರಾಮಸ್ಥರ ಅತೃಪ್ತಿಯಾಗಿದೆ.
ಇದೀಗ ಹೇಗಾದರೂ ಮಾಡಿ ಮುಂದಿನ ಶೈಕ್ಷಣಿಕ ವರ್ಷದಿಂದ ಲಾದರೂ ಬೇಟೋಳಿಯಲ್ಲಿ ಪ್ರೌಢ ತರಗತಿಯನ್ನು ಆರಂಭಿಸಲೇಬೇಕು ಪಣ ತೊಟ್ಟಂತಿರುವ ಗ್ರಾಮದ ಹಿರಿಯ ವಿದ್ಯಾಭಿಮಾನಿ ಮತ್ತು ಹಿರಿಯ ಪತ್ರಕರ್ತರಾದ ಕುವೇಂಡ ವೈ. ಹಂಝತುಲ್ಲಾ ಅವರು, ಇದಕ್ಕಾಗಿ ಅವಿರತ ಪ್ರಯತ್ನ ದಲ್ಲಿದ್ದಾರೆ. 63 ವರ್ಷಗಳಷ್ಟು ಹಳೆಯ ಈ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ಆರಂಭಿಸಲು ಅನುಮತಿ ಕೋರಿ 2015-16ರಿಂದ ಎಸ್‍ಡಿ ಎಂಸಿ ಸಮಿತಿಯು ಪ್ರಯತ್ನ ನಡೆಸುತ್ತಲೇ ಬಂದಿದೆ. ಇದುವರೆಗೂ ಬೇಡಿಕೆ ಈಡೇರಲಿಲ್ಲ. ಆದರೂ ಇದೀಗ ಮತ್ತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಾದರೂ ಬೇಟೋಳಿ ಶಾಲೆಯಲ್ಲಿ ಪ್ರೌಢ ತರಗತಿಯನ್ನು ಆರಂಭಿಸಲು ಸರ್ಕಾರದಿಂದ ಅನುಮತಿ ದೊರೆಯುವ ಆಶಾ ಭಾವನೆಯಿದೆ. ಸರಕಾರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮತಿ ನೀಡಲು ಅವಕಾಶವಿದೆ ಎಂದು ಅವರು ಹೇಳುತ್ತಾರೆ.
- ರಫೀಕ್ ತೂಚಮಕೇರಿ