ಸಿದ್ದಾಪುರ, ಮಾ. 15: ಸಿದ್ದಾಪುರದಲ್ಲಿ ನಡೆದ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಸಿದ್ದಾಪುರ ಪಯನೀಯರ್ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಹೆಚ್.ಎಂ.ಸಿ. ತಂಡ ಪಡೆದು ಕೊಂಡಿದೆ. ಸಿದ್ದಾಪುರದ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸಿದ್ದಾಪುರದ ಚರ್ಚ್ ಮೈದಾನದಲ್ಲಿ ನಡೆದ ಪ್ರೋ ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯಾವಳಿಯಲ್ಲಿ ಪಯನೀಯರ್ ತಂಡ ಹಾಗೂ ಹೆಚ್.ಎಂ.ಸಿ ತಂಡಗಳ ನಡುವೆ ರೋಮಾಂಚಕಾರಿ ಪಂದ್ಯ ನಡೆದು ಪಯನೀಯರ್ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರೂ. 30 ಸಾವಿರ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ದ್ವಿತೀಯ ಸ್ಥಾನವನ್ನು ಹೆಚ್.ಎಂ.ಸಿ. ತಂಡ ರೂ. 20 ಸಾವಿರ ಹಾಗೂ ಟ್ರೋಫಿ ಪಡೆದುಕೊಂಡಿತ್ತು. ತೃತೀಯ ಸ್ಥಾನ ಕ್ಲಾಸಿಕ್ ರೈಡರ್ಸ್, ಚತುರ್ಥ ಸ್ಥಾನ ವೀರಾಜಪೇಟೆಯ ರೀಜಾನ್ಸಿ ತಂಡ ಪಡೆದುಕೊಂಡಿತ್ತು. ಪ್ರೋ ಲೀಗ್ ಕಬಡ್ಡಿ ಪಂದ್ಯಾವಳಿಗೆ 8 ತಂಡಗಳು ಭಾಗವಹಿಸಿದ್ದವು. ತೃತೀಯ ಸ್ಥಾನ ಪಡೆದ ತಂಡ ರೂ. 15 ಸಾವಿರ ಹಾಗೂ ಚತುರ್ಥ ಸ್ಥಾನ ಪಡೆದ ತಂಡ ರೂ. 10 ಸಾವಿರ ಹಾಗೂ ಟ್ರೋಫಿ ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಅರುಣ್ ಮಾಚಯ್ಯ ಹಾಗೂ ತಾ.ಪಂ. ಮಾಜಿ ಸದಸ್ಯ ಪಿ.ವಿ. ಜಾನ್ಸನ್ ಬಿಜೋಯ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಹಾಜರಿದ್ದರು. ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಕ್ರೀಡಾಪಟುಗಳು ಆಗಮಿಸಿದ್ದರು. - ವಾಸು