ಸೋಮವಾರಪೇಟೆ, ಮಾ. 16: ಗ್ರಾಹಕರು ತಾವು ಖರೀದಿಸಿದ ವಸ್ತುಗಳಿಂದ ಮೋಸಕ್ಕೆ ಒಳಗಾದರೆ ಗ್ರಾಹಕರ ನ್ಯಾಯಾಲಯದ ಮೂಲಕ ನ್ಯಾಯ ಪಡೆಯಲು ಮುಂದಾಗಬೇಕೆಂದು ಇಲ್ಲಿನ ಜೆಎಂಎಫ್‍ಸಿಯ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಕರೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘದ ಆಶ್ರಯದಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ಗ್ರಾಹಕರ ದಿನಾಚರಣೆ ಹಾಗು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ವೇದಿಕೆ ಕಾನೂನಿನಲ್ಲಿ ಸರ್ಕಾರಿ ನೌಕರರ ಸೇವೆ ಹಾಗೂ ಸಂಘ-ಸಂಸ್ಥೆಗಳ ಸೇವೆಗಳು ಒಳಪಟ್ಟಿರುತ್ತವೆ. ಸರ್ಕಾರಿ ನೌಕರರು ವಿನಾಕಾರಣ ಕೆಲಸ ಕಾರ್ಯದಲ್ಲಿ ವಿಳಂಬ ಮಾಡಿ ನಷ್ಟಕ್ಕೆ ಕಾರಣರಾದರೆ ಹಾಗೂ ಸಂಘ-ಸಂಸ್ಥೆಗಳಿಂದ ಮೋಸ ಹೋದರೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಬಹುದು. ವಿಳಂಬ ಸಾಬೀತಾದರೆ ಸರ್ಕಾರಿ ನೌಕರರು ತನ್ನ ಸಂಬಳದಲ್ಲಿ ಪರಿಹಾರ ಕೊಡಬೇಕಾಗುತ್ತದೆ ಎಂದರು.
ಮಾರುಕಟ್ಟೆಯಲ್ಲಿರುವ ವಂಚಕರ ಜಾಲದ ಬಗ್ಗೆ ಗ್ರಾಹಕರು ಜಾಗೃತರಾಗಬೇಕು. ವ್ಯಕ್ತಿ ಆಧಾರಿತ ಜಾಹಿರಾತಿಗೆ ಮರುಳಾಗಿ ಕಳಪೆ ಗುಣಮಟ್ಟದ ವಸ್ತುಗಳನ್ನು ಖರೀದಿಸಬಾರದು. ಖರೀದಿ ಮಾಡಿದ ವಸ್ತುವಿಗೆ ಬಿಲ್ ಪಡೆಯಬೇಕು. ಮೋಸ ಹೋಗಿದ್ದು ಕಂಡುಬಂದಾಗ ನೇರವಾಗಿ ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬೇಕು ಎಂದರು.
ಸಿವಿಲ್ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮಾತನಾಡಿ, ರೂ. 20 ಲಕ್ಷಗಳ ಪರಿಹಾರದ ವ್ಯಾಜ್ಯಗಳು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ, ಅದಕ್ಕೂ ಮೇಲ್ಪಟ್ಟು ರೂ. 1 ಕೋಟಿವರೆಗಿನ ವ್ಯಾಜ್ಯಗಳು ರಾಜ್ಯ ನ್ಯಾಯಾಲಯದಲ್ಲಿ ನಡೆಯುತ್ತವೆ. ಈ ಕಾನೂನು ಸೌಲಭ್ಯದ ಬಗ್ಗೆ ಗ್ರಾಹಕರು ಅರಿವು ಹೊಂದಿರಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಿಟ್ಟಿಯಪ್ಪ ಇದ್ದರು.