ಮಡಿಕೇರಿ, ಮಾ. 14: ಕಳೆದ 2014-15ನೇ ಸಾಲಿನಿಂದ ಇದುವರೆಗೆ ಹಿಂದಿನ ಸುಮಾರು ಮೂರು ವರ್ಷಗಳಲ್ಲಿ ಕೊಡಗಿನ ಅಲ್ಲಲ್ಲಿ ಉಪಟಳ ನೀಡುತ್ತಿದ್ದ ಹತ್ತು ಕಾಡಾನೆಗಳನ್ನು ಸೆರೆಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಅವಧಿಯಲ್ಲಿ ಒಟ್ಟು 34 ಮಂದಿ ಪ್ರಾಣ ಕಳೆದುಕೊಂಡಿರುವದಾಗಿಯೂ ಅಂಕಿ ಅಂಶ ನೀಡಿದ್ದಾರೆ.

ಆ ಪ್ರಕಾರ 2014-15ನೇ ಸಾಲಿನಲ್ಲಿ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸುತ್ತಮುತ್ತ ಸಾರ್ವಜನಿಕರಿಗೆ ಉಪದ್ರ ನೀಡುತ್ತಿದ್ದ ಎರಡು ಗಂಡಾನೆಗಳನ್ನು ಹಿಡಿದು ಮತ್ತಿಗೋಡುವಿನಲ್ಲಿ ಕ್ರಾಲ್ ನಿರ್ಮಿಸಿ ಪಳಗಿಸಲಾಗುತ್ತಿದೆ. ಇನ್ನೂ 2015-16ನೇ ವರ್ಷದಲ್ಲಿ ಕುಶಾಲನಗರದ ಪೊನ್ನತ್‍ಮೊಟ್ಟೆ ಹಾಗೂ ಅತ್ತೂರು ನಲ್ಲೂರು ಸುತ್ತಮುತ್ತ ತೊಂದರೆ ಉಂಟುಮಾಡುತ್ತಿದ್ದ ಇನ್ನೆರಡು ಗಂಡಾನೆಗಳನ್ನು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದೆ.

2016-17ನೇ ಸಾಲಿಗೆ ಮಡಿಕೇರಿ ವಿಭಾಗದ ಕೆದಕಲ್, ಮೀನುಕೊಲ್ಲಿ ಸುತ್ತಮುತ್ತ ತೊಂದರೆ ಉಂಟು ಮಾಡುತ್ತಿದ್ದ ಎರಡು ಕಾಡಾನೆಗಳನ್ನು ಹಿಡಿದು ದುಬಾರೆ ಶಿಬಿರದಲ್ಲಿ ಪಳಗಿಸುತ್ತಿದ್ದು, ಅದೇ ವರ್ಷ ಅಮ್ಮತ್ತಿ ಸುತ್ತಮುತ್ತ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಮೂರು ಕಾಡಾನೆಗಳನ್ನು ಸೆರೆ ಹಿಡಿದು ಅವುಗಳನ್ನು ಕೂಡ ದುಬಾರೆಯಲ್ಲಿ ಪಳಗಿಸಲಾಗುತ್ತಿದ್ದು, ಕಳೆದ ವರ್ಷಾಂತ್ಯಕ್ಕೆ ಕುಶಾಲನಗರ ವ್ಯಾಪ್ತಿಯಲ್ಲಿ ಏಕದಂತವಿರುವ ದೈತ್ಯ ಸೆರೆಯಾಗಿದೆ. ಈ ಸಲಗವನ್ನು ಮೂಲೆಹೊಳೆ ಶಿಬಿರಕ್ಕೆ ಸೇರಿಸಲಾಗಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾಡಾನೆಗಳ ಧಾಳಿಗೆ ಸಿಲುಕಿ ಒಟ್ಟು 34 ಮಂದಿ ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಗಳಿಗೆ ತಲಾ ರೂ. 5 ಲಕ್ಷದಂತೆ ಒಟ್ಟು ರೂಪಾಯಿ ಒಂದು ಕೋಟಿ ಐವತ್ತು ಲಕ್ಷ ಮೊತ್ತವನ್ನು ಪರಿಹಾರ ನೀಡಲಾಗಿದೆ ಎಂದು ಇಲಾಖಾಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೆ ಈಚೆಗೆ ಆನೆ ಧಾಳಿಗೆ ಸಿಲುಕಿ ಮೃತರಾಗಿರುವ ಸಿದ್ದಾಪುರ ಬಳಿಯ ಕುಕ್ಕನೂರು ಮೋಹನ್‍ದಾಸ್ ಕುಟುಂಬ ಹಾಗೂ ದುಬಾರೆ ಸಾಕಾನೆ ಶಿಬಿರದ ಮಾವುತ ಜೆ.ಎ. ಮಣಿ ಸಾವಿಗೀಡಾದ ಸಂದರ್ಭ ಆ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಸೇರಿದಂತೆ ಒಟ್ಟು ರೂ. 1.59 ಕೋಟಿ ಪರಿಹಾರ ನೀಡಿರುವದಾಗಿ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಈ ಮೂರು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಿತಿಮತಿ ಸುತ್ತಮುತ್ತಲಿನ 16 ಮಂದಿ ಕಾಡಾನೆ ಧಾಳಿಯಿಂದ ಮೃತರಾಗಿದ್ದು, ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ 9 ಮಂದಿ ಹಾಗೂ ವೀರಾಜಪೇಟೆ ಸುತ್ತಮುತ್ತ ಐವರು ಸೇರಿದಂತೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಬ್ಬರು ಕಾಡಾನೆಗೆ ಬಲಿಯಾಗಿದ್ದಾರೆ. ಇನ್ನು ಶ್ರೀಮಂಗಲ ವ್ಯಾಪ್ತಿಯ ಬಿರುನಾಣಿ ಹಾಗೂ ಮಡಿಕೇರಿ ಬಳಿಯ ಮದೆ ಗ್ರಾಮದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆ ಕೊಡಗಿನಲ್ಲಿ ಕಾಡಾನೆ - ಮಾನವ ಸಂಘರ್ಷ ತಡೆಗೆ ಅರಣ್ಯ ಇಲಾಖೆಯು ಹಲವು ಯೋಜನೆ ಗಳನ್ನು ಕೈಗೊಂಡಿದ್ದು, ಈಚೆಗೆ ರಾಷ್ಟ್ರಮಟ್ಟದ ಕೇಂದ್ರೀಯ ಅರಣ್ಯ ಪರಿಸರ ಸಚಿವಾಲಯ ಸಭೆಯಲ್ಲಿ ಕೂಡ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ವಿಚಾರ ಪ್ರಸ್ತಾಪಗೊಂಡಿದ್ದಾಗಿ ಮೂಲಗಳು ತಿಳಿಸಿದೆ. ಆ ಸಲುವಾಗಿ ಕೇಂದ್ರದಿಂದ ಕೂಡ ಸಾಕಷ್ಟು ಅನುದಾನ ಕೊಡಗಿಗೆ ಬಿಡುಗಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ರಕ್ಷಿತಾರಣ್ಯದೊಳಗೆ ವನ್ಯಪ್ರಾಣಿಗಳ ಸಹಿತ ಕಾಡಾನೆಗಳಿಗೆ ಆಹಾರ ಮತ್ತು ನೀರು ಕಲ್ಪಿಸುವ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇದರೊಂದಿಗೆ ಕಾಡಿನಿಂದ ನಾಡಿಗೆ ಗಜಪಡೆ ನುಸುಳದಂತೆ ರೈಲ್ವೆ ಬ್ಯಾರಿಕೇಡ್ ಬೇಲಿಯನ್ನು ಹಲವೆಡೆ ಕಿ.ಮೀ. ದೂರಗಟ್ಟಲೆ ನಿರ್ಮಿಸಲಾಗುವದು ಎಂದು ‘ಶಕ್ತಿ’ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.