ಕೂಡಿಗೆ, ಮಾ. 14: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ, ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತೆ ಹಾಗೂ ಬಹುದಿನಗಳ ಬೇಡಿಕೆಯಾಗಿದ್ದ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಎರಡೂವರೆ ವರ್ಷ ಕಳೆದು, ಶೇ. 30 ರಷ್ಟು ಕಾಮಗಾರಿ ನಡೆದು ಇದೀಗ ಸರಕಾರದಿಂದ ಹಣ ಬಿಡುಗಡೆ ಯಾಗಿಲ್ಲ ಎಂಬ ನೆಪದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿ ರಾಜ್ಯಮಟ್ಟದ ಮೇಲಧಿಕಾರಿಗಳಿಂದ ಗುತ್ತಿಗೆದಾರನಿಗೆ ಸೂಚನೆ ಮೇರೆ ಕಾಮಗಾರಿ ನಡೆಯುತ್ತಿದೆ. ಶಕ್ತಿ ದಿನಪತ್ರಿಕೆಯಲ್ಲಿ ತಾ. 10 ರಂದು ಹಾಕಿ ಟರ್ಫ್ ಕಾಮಗಾರಿ ಪುನರಾರಂಭ ಶೀರ್ಷಿಕೆಯಲ್ಲಿ ಪ್ರಕಟ ಗೊಂಡ ವರದಿಗೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಕೂಡಿಗೆ ಕ್ರೀಡಾಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಹಾಕಿ ತರಬೇತುದಾರ ವೆಂಕಟೇಶ್ ಮತ್ತು ಅಂತೋಣಿ ಡಿಸೋಜ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಕಾಮಗಾರಿಯು ಗುಣಮಟ್ಟದಲ್ಲಿ ನಡೆಯುತ್ತಿದ್ದು, ಸ್ಥಳದಲ್ಲಿ ಕಿರಿಯ ಇಂಜಿನಿಯರ್‍ಗಳು ಇದ್ದು, ಕಾಮಗಾರಿ ನಡೆಯುವ ಸಂದರ್ಭ ವೀಕ್ಷಣೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಕಿರಿಯ ಇಂಜಿನಿಯರ್ ಮತ್ತು ಗುತ್ತಿಗೆದಾರರು ಕ್ರಮಬದ್ಧವಾಗಿ ಕ್ರೀಡಾಶಾಲೆಯ ಹಾಕಿ ಟರ್ಫ್ ಕಾಮಗಾರಿಯಲ್ಲಿ ತೊಡಗಿದ್ದಾರೆ.