ಮಡಿಕೇರಿ, ಮಾ. 14: ಹದಿನೆಂಟು ವರ್ಷ ಪೂರ್ಣ ಗೊಂಡಿರುವ ವಿಕಲಚೇತನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲು ಇನ್ನೂ ಅವಕಾಶವಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡದಿರುವ ವಿಕಲಚೇತನರು ಹತ್ತಿರ ಬಿಎಲ್‍ಒ ಅಥವಾ ತಹಶೀಲ್ದಾರರ ಕಚೇರಿಗೆ ತೆರಳಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕೋರಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಮತಗಟ್ಟೆಗಳ ಸುಸ್ಥಿತಿ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾರ್ಯವು ನಿರಂತರ ಪ್ರಕ್ರಿಯೆಯಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು ಹೆಸರು ನೋಂದಾಯಿಸಬಹುದಾಗಿದೆ. ಈ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ವಿಶೇಷ ಅವಕಾಶವಿದೆ ಎಂದು ಸಲಹೆ ಮಾಡಿದರು.

ಈ ಬಾರಿ ವಿಕಲಚೇತನರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಲು ವ್ಹೀಲ್‍ಚೇರ್ ವ್ಯವಸ್ಥೆ ಮಾಡಲಾಗಿದ್ದು, ವಿಕಲಚೇತನರು ಮತದಾನ ಮಾಡುವಂತಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಾಲೆಗಳು, ಅಂಗನವಾಡಿಗಳು ಸೇರಿದಂತೆ 530 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಜಿಲ್ಲೆಯ 42 ಮತಗಟ್ಟೆಗಳಲ್ಲಿ ರ್ಯಾಂಪ್(ಇಳಿಜಾರು) ಕಾಮಗಾರಿ, 14 ಕಡೆ ಕುಡಿಯುವ ನೀರು ಮತ್ತು 20 ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಹಾಗೆಯೇ 20 ಮತಗಟ್ಟೆಗಳಲ್ಲಿ ಪಿಠೋಪಕರಣ, 11 ಮತಗಟ್ಟೆಗಳಲ್ಲಿ ಶೌಚಾಲಯ ಕಾಮಗಾರಿ ಕೈಗೊಳ್ಳಲು ಬಾಕಿ ಇದ್ದು, ಈ ಕಾರ್ಯಗಳನ್ನು ಮೂರು ದಿನದೊಳಗೆ ಪೂರ್ಣ ಗೊಳಿಸಿ, ವರದಿ ಕಳುಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಚುನಾವಣೆ ದಿನಾಂಕ ಪ್ರಕಟವಾದ ನಂತರ ಚುನಾವಣೆ ವೀಕ್ಷಕರು ಪ್ರತಿ ಮತಗಟ್ಟೆಗೂ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಆದ್ದರಿಂದ ಈ ಬಗ್ಗೆ ಈಗಲೇ ಎಚ್ಚರ ವಹಿಸಿ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದುಬಾರೆ ಮತಗಟ್ಟೆಯನ್ನು ಈಗ ದುರಸ್ಥಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಕಳೆದ ಬಾರಿ ಸಭೆಯಲ್ಲಿ ಸುಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಲಾಗಿತ್ತು. ಈಗ ಕಾಮಗಾರಿ ಪ್ರಾರಂಭಿಸಿರುವದು ಏಕೆ. ಸದ್ಯ ಈಗ ಪ್ರಾರಂಭಿಸಿರುವ ಕಾಮಗಾರಿಯನ್ನು 15 ದಿನದೊಳಗೆ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್ ಅವರು ಚುನಾವಣೆಗೆ ಸಂಬಂಧಿಸಿದಂತೆ ಬಹಳಷ್ಟು ಕೆಲಸಗಳಿದ್ದು, ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.

ಪ್ರತಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರ್ಯಾಂಪ್ ವ್ಯವಸ್ಥೆ, ಶೌಚಾಲಯ ಮತ್ತಿತರ ಸೌಲಭ್ಯಗಳು ಶಾಶ್ವತವಾಗಿರಬೇಕು. ಅ ನಿಟ್ಟಿನಲ್ಲಿ ತ್ವರಿತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ತಿಳಿಸಿದರು.

ಜಿ.ಪಂ. ಅಭಿಯಂತರ ರಾಜ್‍ಕುಮಾರ್ ರೆಡ್ಡಿ ಮತಗಟ್ಟೆಗಳಲ್ಲಿ ಅಗತ್ಯ ರ್ಯಾಂಪ್ ವ್ಯವಸ್ಥೆ ಮಾಡಲಾಗಿದ್ದು, ಬಾಕಿ ಇರುವ ಮತಗಟ್ಟೆಗಳಿಗೆ ರ್ಯಾಂಪ್ ಕಾಮಗಾರಿ ಪೂರ್ಣಗೊಳಿಸಿ, ವರದಿ ನೀಡಲಾಗುವದು ಎಂದು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್, ಜಿ.ಪಂ.ನ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ, ಕೃಷಿ ಇಲಾಖೆ ಉಪ ನಿರ್ದೇಶಕ ರಾಜು, ಐ.ಟಿ.ಡಿ.ಪಿ. ಇಲಾಖೆ ಅಧಿಕಾರಿ ಪ್ರಕಾಶ್, ನಗರಸಭೆ ಅಭಿಯಂತರ ಸ್ವಾಮಿ, ತಹಶೀಲ್ದಾರರಾದ ಕುಸುಮ, ಗೋವಿಂದರಾಜು, ತಾ.ಪಂ. ಇ.ಒ ಲಕ್ಷ್ಮಿ, ಜಯಣ್ಣ, ಇತ್ತರರು ಇದ್ದರು.