ಸೋಮವಾರಪೇಟೆ, ಮಾ. 14: ಎಸ್‍ಇಪಿ ಯೋಜನೆಯಡಿ ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ಕೈಗೊಳ್ಳಲಾಗುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು.

ಎಸ್‍ಇಪಿ ಯೋಜನೆಯಡಿ ರೂ. 10 ಲಕ್ಷ ವೆಚ್ಚದಲ್ಲಿ ತಣ್ಣೀರುಹಳ್ಳದ 2 ರಸ್ತೆಗಳನ್ನು ಕಾಂಕ್ರಿಟೀಕರಣ ಗೊಳಿಸಬೇಕಿದ್ದು, ಕಾಮಗಾರಿಗೆ ಬಳಸಲ್ಪಡುತ್ತಿರುವ ವೆಟ್‍ಮಿಕ್ಸ್ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸ್ಥಳೀಯರು ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಅವರ ಗಮನಕ್ಕೆ ತಂದಿದ್ದರು.

ಈ ಬಗ್ಗೆ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನ ಸೆಳೆದ ಹಿನ್ನೆಲೆ, ಇಂದು ಸ್ಥಳ ಪರಿಶೀಲನೆ ನಡೆಸಿದ ಅಭಿಯಂತರ ಮಹೇಂದ್ರಕುಮಾರ್ ಅವರು, ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದ್ದು, ತಕ್ಷಣ ರಸ್ತೆಗೆ ಹಾಕಿರುವ ಕಳಪೆ ವೆಟ್‍ಮಿಕ್ಸ್‍ನ್ನು ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳ ಬೇಕೆಂದು ಗುತ್ತಿಗೆದಾರ ಶಿವಕುಮಾರ್ ಅವರಿಗೆ ನಿರ್ದೇಶನ ನೀಡಿದರು.

15 ಸೆ.ಮೀ. ವೆಟ್‍ಮಿಕ್ಸ್ ಹಾಕಿ ರೋಲ್ ಮಾಡಿದ ನಂತರ 15 ಸೆ.ಮೀ. ಎಂ-10 ಕಾಂಕ್ರಿಟ್ ಹಾಕಬೇಕು. ಇಲ್ಲಿ ಅಂದಾಜು ಪಟ್ಟಿಯಂತೆ ಕೆಲಸ ನಿರ್ವಹಿಸದಿರುವದು ಕಂಡುಬಂದಿದ್ದು, ಕಳಪೆ ಗುಣಮಟ್ಟದ ವೆಟ್‍ಮಿಕ್ಸ್‍ನ್ನು ತೆರವುಗೊಳಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಗ್ರೇಡಿಯೇಷನ್ ಸಮರ್ಪಕ ವಾಗಿರಬೇಕು ಎಂದು ಅಭಿಯಂತರರು, ಗುತ್ತಿಗೆದಾರರಿಗೆ ಸೂಚಿಸಿದರು.

ಎಸ್‍ಇಪಿ ಮತ್ತು ಟಿಎಸ್‍ಪಿ ಯೋಜನೆಯಡಿ ತಾಲೂಕಿನಾದ್ಯಂತ ನಡೆಯುತ್ತಿರುವ ಹಲವಷ್ಟು ರಸ್ತೆ ಕಾಮಗಾರಿಗಳು ಕಳಪೆಯಾಗಿವೆ. ಅಭಿಯಂತರರು ಸ್ಥಳ ಪರಿಶೀಲನೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಬಗ್ಗನ ಅನಿಲ್, ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರೇ ಹೆಚ್ಚಿನ ಜಾಗೃತಿ ವಹಿಸಬೇಕು. ಸರ್ಕಾರದ ಹಣ ಕಳಪೆ ಕಾಮಗಾರಿ ಮೂಲಕ ಪೋಲಾಗದಂತೆ ತಡೆಯಬೇಕು ಎಂದರು. ಈ ಸಂದರ್ಭ ಗ್ರಾಮಸ್ಥರಾದ ನಂದೀಶ್, ಏಳುಮಳೈ ಸೇರಿದಂತೆ ಇತರರು ಉಪಸ್ಥಿತರಿದ್ದು, ಕಳಪೆ ಕಾಮಗಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.