ಮಡಿಕೇರಿ, ಮಾ. 14: ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯಲ್ಲಿ ಭೋವಿ ಜನಾಂಗಕ್ಕೆ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಕ್ರಾಂತಿ ಸಂಘಟನೆಯ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಭೋವಿ ಜನಾಂಗಕ್ಕೆ ಗಣಿಗಾರಿಕೆಯಲ್ಲಿ ಶೇ. 25 ರಷ್ಟು ಅವಕಾಶ ನೀಡಬೇಕೆನ್ನುವ ನಿಯಮವಿದ್ದರೂ ಕೊಡಗು ಜಿಲ್ಲೆಯಲ್ಲಿ ಇದು ಪಾಲನೆಯಾ ಗುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಭೋವಿ ಜನಾಂಗ ನಡೆಸುತ್ತಿರುವ ಗೊಂದಿಬಸವನಹಳ್ಳಿಯ ಗಣಿಗಾರಿಕೆಗೆ ಮಾತ್ರ ಅರಣ್ಯ ಇಲಾಖೆ ತಡೆಯೊಡ್ಡುತ್ತಿದ್ದು, ರಾಜ್ಯದ ಇತರ ಭಾಗಗಳಲ್ಲಿ ಅರಣ್ಯ ವ್ಯಾಪ್ತಿಯಲ್ಲೇ ಗಣಿಗಾರಿಕೆ ನಡೆಯುತ್ತಿದ್ದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಭೋವಿ ಜನಾಂಗಕ್ಕೆ ಮಾತ್ರ ಯಾಕೆ ಈ ರೀತಿಯ ಅಡೆತಡೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಡಿ. ಸುಜಿತ್ ಪ್ರಶ್ನಿಸಿದರು.
ಜಾತಿ ದೃಢೀಕರಣ ಪತ್ರದಲ್ಲಿ ಭೋವಿ ಬದಲಿಗೆ ನಾಯಕ ಎಂದು ನಮೂದಿಸುತ್ತಿರುವದರಿಂದ ಭೋವಿ ನಿಗಮದ ಮೂಲಕ ಬಿಡುಗಡೆ ಯಾಗುತ್ತಿರುವ ಅನುದಾನ ಸದ್ಭಳಕೆಯಾಗುತ್ತಿಲ್ಲವೆಂದು ಅವರು ವಿಷಾದ ವ್ಯಕ್ತಪಡಿಸಿದರು. ಭೋವಿ ಸಮುದಾಯ ಭವನಕ್ಕೆ 2 ಎಕರೆ ಭೂಮಿ, ರೂ. 1 ಕೋಟಿ ಅನುದಾನ, ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು, ಭೋವಿ ನಿಗಮದಿಂದ ಅನುದಾನ ನೀಡಬೇಕು, ಜಾತಿ ದೃಢೀಕರಣ ಪತ್ರದಲ್ಲಿ ಭೊವಿ ಎಂದು ನಮೂದಿಸಬೇಕು, ಗೊಂದಿಬಸವನಹಳ್ಳಿಯ ಭೋವಿ ಜನಾಂಗದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಭೋವಿ ಜನಾಂಗದ ಮಂದಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವದನ್ನು ತಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಗೌರವ ಅಧ್ಯಕ್ಷ ಆರ್.ಸಿ. ವಿಜಯ, ಸೋಮವಾರ ಪೇಟೆ ಉಪಾಧ್ಯಕ್ಷ ಎಂ.ಕೆ. ಸುಬ್ರಮಣಿ, ಸಂಘಟನಾ ಕಾರ್ಯದರ್ಶಿ ಶಿವ ಕುಮಾರ್, ಪ್ರಧಾನ ಕಾರ್ಯದರ್ಶಿ ವಿನಾಯಕ, ಸಂಚಾಲಕ ಕಾರ್ತಿಕ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಪ್ರತಿಭಟನಾ ಕಾರರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದರು.