ಶನಿವಾರಸಂತೆ, ಮಾ. 14: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ 2018-19ನೇ ಸಾಲಿನ ಕೋಳಿ, ಕುರಿ, ಹಂದಿ ಮಾಂಸ ಮಾರಾಟದ ಹಕ್ಕಿನ ಬಹಿರಂಗ ಹರಾಜು/ ಲೈಸನ್ಸ್ ಸಭೆ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ಸಂದೀಪ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಆರಂಭವಾಗಿ ಬಿಡ್ಡುದಾರರು ಬಿಡ್ಡು ಕೂಗುತ್ತಿದ್ದಂತೆ ಗೊಂದಲ, ಗದ್ದಲದ ವಾತಾವರಣ ನಿರ್ಮಾಣ ವಾಯಿತು. ಕೆಲವರು ಹರಾಜು ಮಾಡುವಂತೆ, ಮತ್ತೆ ಕೆಲವರು ಲೈಸನ್ಸ್ ನೀಡುವಂತೆ ಆಗ್ರಹಿಸತೊಡಗಿದರು. ಹರಾಜಿಗೆ ನಿಗದಿ ಪಡಿಸಿದ ಮೊತ್ತವೂ ಅಧಿಕ. ಪಂಚಾಯಿತಿಗೆ ಸ್ವಂತ ಕಟ್ಟಡವೂ ಇಲ್ಲ ಎಂಬ ಆಕ್ಷೇಪವೂ ವ್ಯಕ್ತವಾಯಿತು.
ಬೆಳಿಗ್ಗೆ 11.30ಕ್ಕೆ ಆರಂಭವಾದ ಹರಾಜು ಸಭೆ ಬಿಡ್ಡುದಾರರ ಗೊಂದಲ, ಗಲಾಟೆಯಿಂದ ಮಧ್ಯಾಹ್ನ 1.30 ಆದರೂ ಬಗೆಹರಿಯಲಿಲ್ಲ. ಬೇಸರಗೊಂಡ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹರಾಜು ಸಭೆಯನ್ನು ಮುಂದೂಡಿ ಸಭೆಯನ್ನು ಮುಕ್ತಾಯಗೊಳಿಸಿತು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಎಚ್.ಎನ್. ಸಂದೀಪ್ ಮಾತನಾಡಿ, ಪಂಚಾಯಿತಿಗೆ ಸ್ವಂತ ಕಟ್ಟಡವಿರಲಿ, ಸ್ವಂತ ಜಮೀನೇ ಇಲ್ಲ. ಬಹಿರಂಗ ಹರಾಜು ಸಾಧ್ಯವಿಲ್ಲದ ಕಾರಣ ಲೈಸನ್ಸ್ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸ ಲಾಗಿತ್ತು. ಪಂಚಾಯಿತಿ ನಿಗದಿ ಪಡಿಸಿದ ಮೊತ್ತವನ್ನು ಸಮ್ಮತಿಸದೇ ಬಿಡ್ಡುದಾರರು ಗಲಾಟೆ ಶುರು ಮಾಡಿದ್ದರಿಂದ ಸಭೆ ಮುಂದೂಡಲ್ಪಟ್ಟಿದೆ. ಮತ್ತೆ ಆಡಳಿತ ಮಂಡಳಿ ಸಭೆ ಕರೆದು, ದಿನ ನಿಗದಿಪಡಿಸಿ ಹರಾಜು ಸಭೆ ನಡೆಸಲಾಗುವದು ಎಂದರು.
ಪಂಚಾಯಿತಿ ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಸೋಮಶೇಖರ್ ಉಮಿ, ಬಸವರಾಜ್ ಬೆಳ್ಳಿ, ಶಿವಕುಮಾರ್, ಸುಮಂತ್, ನಿರ್ಮಲಾ, ವಾಣಿ, ಪಾರ್ವತಿ, ಶಿವಮ್ಮ, ಮಹಾದೇವಮ್ಮ, ಪಿಡಿಓ, ಬಿಲ್ ಸಂಗ್ರಾಹಕ ಚಂದ್ರಶೇಖರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.