ಗುಡ್ಡೆಹೊಸೂರು, ಮಾ. 14: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದ ಕುಮಾರ, ಲಕ್ಷ್ಮಿ ಎಂಬವರ ಪುತ್ರಿ ಪ್ರಿಯಾ ಎಂಬವಳ ವಿವಾಹ ಕಳೆದ ತಿಂಗಳು ಕುಶಾಲನಗರದ ರೈತಭವನದಲ್ಲಿ ನಡೆದಿತ್ತು. ಹುಣಸೂರು ಸಮೀಪದ ಗದ್ದಿಗೆ ಬಸವನಹಳ್ಳಿ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಸಂಪ್ರದಾಯ ಪ್ರಕಾರ ಮಗಳನ್ನು ಕರೆತರಲು ಹುಣಸೂರಿಗೆ ಬಂಧುಗಳೊಂದಿಗೆ ತೆರಳಿದ್ದರು.

ನಿನ್ನೆ ಪುತ್ರಿಯ ಮನೆಯಲ್ಲಿ ತಂಗಿ ಇಂದು ಮಗಳನ್ನು ಕರೆದುಕೊಂಡು ಬರುವ ತಯಾರಿಯಲ್ಲಿದ್ದರು. ಮುಂಜಾನೆ 8 ಗಂಟೆ ಸಮಯದಲ್ಲಿ ತಾಯಿ ಲಕ್ಷ್ಮಿ ಮಗಳ ಮನೆಯಲ್ಲಿ ಕುಸಿದು ಬಿದ್ದು ಮರಣಹೊಂದಿದರು. ಮಗಳ ಮನೆಯಲ್ಲೇ ಮೃತಪಟ್ಟ ಪ್ರಿಯಾಳ ತಾಯಿಯ ಮೃತದೇಹವನ್ನು ಅದೇ ವಾಹನದಲ್ಲಿ ಗುಡ್ಡೆಹೊಸೂರಿಗೆ ತರಲಾಯಿತು. ಪುತ್ರಿ ಕಣ್ಣೀರಿನೊಂದಿಗೆ ಕಂಬನಿ ಮಿಡಿಯುತ್ತಿದ್ದ ದೃಶ್ಯ ಕಂಡು ಬಂತು.

ಮೊದಲ ಬಾರಿಗೆ ತನ್ನ ತಾಯಿಯೊಂದಿಗೆ ತವರಿಗೆ ಬರುವ ಪುತ್ರಿ ತನ್ನ ತಾಯಿಯ ಶವದೊಂದಿಗೆ ತವರಿಗೆ ಬಂದಂತಹ ವಿಧಿಲೀಲೆಯ ಬಗ್ಗೆ ಜನರು ಮರುಗುತ್ತಿದ್ದರು! -ಗಣೇಶ್ ಕುಡೆಕಲ್