ಸೋಮವಾರಪೇಟೆ, ಮಾ.10: ಮಾದಾಪುರ ಗ್ರಾಮ ಪಂಚಾಯಿತಿ ಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ತಾ. 12ರಂದು ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಚೇರಿ ಎದುರು ಸಾರ್ವಜನಿಕರ ಸಹಕಾರ ದೊಂದಿಗೆ ಪ್ರತಿಭಟನೆ ನಡೆಸಲಾಗು ವದು ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ್ ಸಾಯಿ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಒಂಬುಡ್ಸ್‍ಮನ್ ಅಥವಾ ಎಸಿಬಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಾ. 12ರಂದು ಪೂರ್ವಾಹ್ನ 10.30ರಿಂದ ಸಂಜೆ 4 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕುಂಬೂರು ಗ್ರಾಮದಲ್ಲಿ ಎನ್‍ಆರ್‍ಇಜಿ ಯೋಜನೆಯಡಿ ಭಾರೀ ಅವ್ಯವಹಾರವಾಗಿದೆ. ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಮಾಡಲಾಗಿದೆ. ಸ್ವಜನಪಕ್ಷಪಾತ, ಸಾಮಾನ್ಯ ಜನರ ಮೇಲೆ ದೌರ್ಜನ್ಯ ಗಳು ನಡೆಯುತ್ತಿವೆ. ಅರ್ಹರಿಗೆ ಮನೆ ವಿತರಿಸಲು ಕೆಲ ಸದಸ್ಯರು ಅಡ್ಡಗಾಲು ಹಾಕುತ್ತಿದ್ದಾರೆ. ಪ್ರಾಮಾಣಿಕ ಪಿಡಿಓ ಅವರನ್ನು ವರ್ಗಾವಣೆ ಮಾಡಲು ಹವಣಿಸಲಾಗುತ್ತಿದೆ. ಇದರೊಂದಿಗೆ ಅಮಾಯಕ ಶಿಕ್ಷಕರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಪ್ರತಿಭಟನೆ ನಡೆಯಲಿದೆ ಎಂದರು.

ಕುಂಬೂರು ಗ್ರಾಮದ ಯುಬಿ ಬಸ್ ನಿಲ್ದಾಣದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲಾಗಿದ್ದರೂ ಸಹ ಗ್ರಾ.ಪಂ.ನಿಂದ 14 ನೇ ಹಣಕಾಸು ಯೋಜನೆ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಬಿಲ್ ಮಾಡಲಾಗಿದೆ. ಸದಸ್ಯರೋರ್ವರು ತನ್ನ ಸಹೋದರನಿಗೆ ಮನೆ ಕೊಡಿಸಿದ್ದು, ಅರ್ಹ ಫಲಾನುಭವಿಗಳಿಗೆ ಎಂಎಲ್‍ಎ ಕೋಟಾದಡಿ ಮನೆ ನೀಡಲೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಭಾಸ್ಕರ್ ಆರೋಪಿಸಿದರು.

ಈ ಹಿಂದೆ ಮನೆ ವಿತರಿಸಲು ಪಂಚಾಯಿತಿಯ ಕೆಲ ಸದಸ್ಯರು ಫಲಾನುಭವಿಗಳಿಂದ 25 ಸಾವಿರ ಹಣವನ್ನು ಪಡೆದಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತವಾದ ನಂತರ ವಾಪಸ್ ನೀಡಿದ್ದಾರೆ. ಇದೀಗ ಅವರುಗಳಿಗೆ ಕಾರ್ಯಾದೇಶ ಪತ್ರ ವಿತರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಪಂಚಾಯಿತಿಯ ಅವ್ಯವಹಾರಗಳ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಶ್ನಿಸಿದ ಸಂದರ್ಭ ಸಾರ್ವಜನಿಕವಾಗಿಯೇ ‘ನಿಮ್ಮ ಮೇಲೆ ಅಟ್ರಾಸಿಟಿ ಕೇಸ್ ಹಾಕಿಸ್ತೇವೆ’ ಎಂದು ಸದಸ್ಯರಾದ ಸೋಮಪ್ಪ ಮತ್ತು ಪ್ರಸನ್ನ ಅವರುಗಳು ಬೆದರಿಕೆ ಹಾಕಿದ್ದಾರೆ. ಸಭೆಯಲ್ಲಿ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸರಿದ್ದರೂ ಸಹ ಬಹಿರಂಗವಾಗಿ ದಲಿತ ದೌರ್ಜನ್ಯ ಕೇಸ್ ಹಾಕುವದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಭಾಸ್ಕರ್ ವಿವರಿಸಿದರು.

ಕುಂಬೂರು ವ್ಯಾಪ್ತಿಯಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳಿಗೆ ಕೇವಲ ಅಧ್ಯಕ್ಷರು, ಪಿಡಿಓ, ಅಭಿಯಂತ ರರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡದೇ, ಆ ವಾರ್ಡ್‍ಗಳ ಸದಸ್ಯರನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಮೂವತ್ತೊಕ್ಲು ಗ್ರಾಮದಲ್ಲಿ ಭದ್ರಕಾಳಿ ದೇವಾಲಯ ರಸ್ತೆ, ಚರಂಡಿ ಯನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ಕೈಗೊಂಡಿದ್ದರೂ ಗ್ರಾ.ಪಂ. ನಿಂದ ಈ ಕೆಲಸಕ್ಕೆಂದು 2016-17ರಲ್ಲಿ 23 ಸಾವಿರ ಬಿಲ್ ಮಾಡಲಾಗಿದೆ. ಇನ್ನು ಕಲ್ಲುಕೋರೆ ಸಮೀಪದ ಜಾನು ಅವರ ಮನೆ ಮುಂಭಾಗ ಕಾಂಕ್ರಿಟ್ ಚರಂಡಿ ನಿರ್ಮಿಸಿದ್ದು, ಇದಕ್ಕೆ 2 ಬಾರಿ ಬಿಲ್ ಮಾಡಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಗೋಷ್ಠಿಯಲ್ಲಿದ್ದ ಮೂವತ್ತೊಕ್ಲು ಗ್ರಾಮಸ್ಥ ಶ್ರೀನಾಥ್ ಆಗ್ರಹಿಸಿದರು.

ಗೋಷ್ಠಿಯಲ್ಲಿ ಮೂವತ್ತೊಕ್ಲು ಗ್ರಾಮದ ಚಂಗಪ್ಪ, ನಾಗಂಡ ಭವಿನ್, ಕುಂಬೂರಿನ ಪಿ.ಎಂ. ಹರೀಶ್ ಉಪಸ್ಥಿತರಿದ್ದರು.