ಮಡಿಕೇರಿ, ಮಾ. 9 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಜಾಸೀಟು ಉದ್ಯಾನವನದಲ್ಲಿ ಇಂದಿನಿಂದ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತ್ತಿದೆ. ತರಕಾರಿ ಹಣ್ಣುಗಳಲ್ಲಿ ಕೆತ್ತನೆ ಮಾಡಿದ ಕಲಾಕೃತಿಗಳು ನೋಡುಗರನ್ನು ಆಕರ್ಷಣೆಗೊಳಿಸುತ್ತಿವೆ. ಮಹಾತ್ಮ ಗಾಂಧಿ, ಡಾ|| ಬಿ.ಆರ್. ಅಂಬೇಡ್ಕರ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸುಭಾಷ್ ಚಂದ್ರಬೋಸ್, ಸ್ವಾಮಿ ವಿವೇಕಾನಂದ, ಚಂದ್ರಶೇಖರ್ ರಾಜ, ಸಂಗೊಳ್ಳಿ ರಾಯಣ್ಣ, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇವರುಗಳ ಚಿತ್ರವನ್ನು ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಲಾಗಿದೆ. ಕಲಾಕೃತಿಗಳು, ಹಣ್ಣುಗಳಿಂದ ಮಾಡಿದ ವಿವಿಧ ರೀತಿಯ ಹೂವುಗಳು ಅತ್ಯಾಕರ್ಷಣೀಯವಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಕವಿ ಶೈಲದಲ್ಲಿ ಕವನ ಬರೆಯುವ ಮಾದರಿ ಸಾಹಿತ್ಯ ಲೋಕವನ್ನು ಬಿಂಬಿಸುತ್ತಿದೆ. ನಗರದ ಕೋಟೆ ಕಲಾಕೃತಿ, ಕಾವೇರಿ ಮಾತೆ ಹಾಗೂ ಮಂಟಪ, ತೀರ್ಥೋದ್ಭವ ಕುಂಡಿಕೆ, ಪಾಲಿಹೌಸ್ ನೆರಳು ಪರದೆ ಮನೆ, ಕಿಚನ್ ಗಾರ್ಡ್ನ್, ಟೆರಸ್ ಗಾರ್ಡ್ನ್, ವರ್ಟಿಕಲ್ ಗಾರ್ಡ್ನ್ ಇತ್ತಿತರ ಫಲಪುಷ್ಪ ಪ್ರದರ್ಶನಗಳು ಮನ ಸೆಳೆಯುತ್ತಿವೆ.
ಆನೆ, ಜಿಂಕೆ, ಹುಲಿ, ಮೊಲ, ಚಿಟ್ಟೆ ಕಲಾಕೃತಿಗಳನ್ನು ಹೂವು ಅಲಂಕಾರಿಕ ಎಲೆಗಳಿಂದ ನಿರ್ಮಿಸಲಾಗಿದೆ.
ಮಕ್ಕಳಿಗೆ ಮನರಂಜನೆ ನೀಡುವ ಸೈಕಲ್, ಫಾರ್ಮುಲ ಕಾರು ಮಾದರಿ ಗಮನ ಸೆಳೆಯುತ್ತಿವೆ. ಮಾವು, ಕಿತ್ತಳೆ, ಅನಾನಾಸ್ ಹಣ್ಣುಗಳು, ಪೋಟೋ ಫ್ರೇಮ್ಗಳ ಮಾದರಿ ಗಮನ ಸೆಳೆಯುತ್ತಿವೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 3000-4000 ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೋನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಗಾಂಪ್ರಿನಾ, ಕಾಕಡ ಮಲ್ಲಿಗೆ, ಚೆಂಡುಹೂ, ಪ್ಲಾಕ್ಸ್, ಜೀನಿಯಾ, ಜರೇನಿಯಂ, ವಿಂಕಾ ರೋಸಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದೆ ಹಾಗೂ 1500 ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ.
ಹಾಗೆಯೇ ನಗರದ ಗಾಂಧೀ ಮೈದಾನದಲ್ಲಿ ಕೃಷಿ ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹೀಗೆ ನಾನಾ ಇಲಾಖೆಗಳ ವಸ್ತು ಪ್ರದರ್ಶನಗಳ ಮಳಿಗೆ ನಿರ್ಮಿಸಲಾಗಿದೆ. 3 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ಶಾಸಕ ಅಪ್ಪಚ್ಚು ರಂಜನ್ ಸಂಜೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಆಶಯದಂತೆ ಈ ಬಾರಿ 1 ತಿಂಗಳ ಮೊದಲೇ ಈ ಪ್ರದರ್ಶನ ಏರ್ಪಡಿಸಿದ್ದು, ತೋಟಗಾರಿಕಾ ಇಲಾಖಾಧಿಕಾರಿಗಳ ಪರಿಶ್ರಮ ಎದ್ದು ಕಾಣುತ್ತಿದೆ. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ,
(ಮೊದಲ ಪುಟದಿಂದ) ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್. ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ವಿಜು ಸುಬ್ರಮಣಿ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಅರಣ್ಯಾಧಿಕಾರಿ ಗಳಾದ ಮಂಜುನಾಥ್, ನೆಹರೂ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಪ್ರಮೋದ್, ಗಿರೀಶ್, ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ದೇವಕಿ, ನಗರಸಭೆ ಪೌರಾಯುಕ್ತೆ ಬಿ.ಶುಭ ಇತರರು ಇದ್ದರು.
ರಂಜನ್ ಶ್ಲಾಘನೆ - ಕಾವೇರಮ್ಮ ಕೋಪ - ಶ್ರೀವಿದ್ಯಾ ಸಂತಸ
ನಗರದ ರಾಜಾಸೀಟ್ನಲ್ಲಿ ಆಯೋಜನೆಯೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇಂದು ಕಾರ್ಯಕ್ರಮ ಉದ್ಘಾಟನೆಯೊಂದಿಗೆ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂಗೀತ ಕಾರಂಜಿ ದುರಸ್ತಿ; ಮಡಿಕೇರಿ ಕೋಟೆ ಅರಮನೆ ವಿನ್ಯಾಸ, ತಲಕಾವೇರಿ ಕ್ಷೇತ್ರ ಕೆತ್ತನೆಗಳು ಗಮನ ಸೆಳೆಯುವದಾಗಿ ಸ್ಮರಿಸಿದರು.
ಅಲ್ಲದೆ ಕೊಡಗಿನ ಆಚಾರ, ವಿಚಾರ, ಸಂಸ್ಕøತಿ, ಆಹಾರ ಪದ್ಧತಿ ಇತ್ಯಾದಿ ಪ್ರವಾಸಿಗರನ್ನು ಆಕರ್ಷಿಸುವಂತಾಗಿದ್ದು, ಆ ದಿಸೆಯಲ್ಲಿಯೇ ಇಂಥಹ ಪ್ರದರ್ಶನಗಳನ್ನು ಏರ್ಪಡಿಸಬೇಕೆಂದು ಸಲಹೆ ನೀಡಿದರು. ಈ ದಿಸೆಯಲ್ಲಿ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಗಳ ಪ್ರಯತ್ನ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.
ಹರ್ಷ ತಂದಿದೆ : ರಾಜಾಸೀಟ್ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸುವ ದಿಸೆಯಲ್ಲಿ ಉತ್ತಮ ಅವಕಾಶ ಲಭ್ಯವಿದ್ದು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತಿದ್ದು, ಮನಸ್ಸಿಗೆ ಹರ್ಷ ತಂದಿದೆ ಎಂದು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜನತೆ ಎಲ್ಲವನ್ನು ವೀಕ್ಷಿಸಿ ಆನಂದಿಸುವಂತೆ ಸಲಹೆ ನೀಡಿದರು.
ಅಸಮಾಧಾನ : ಈ ಬಾರಿಯ ಫಲಪುಷ್ಪ ಪ್ರದರ್ಶನದ ಬಗ್ಗೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ಫಲಪುಷ್ಪ ಪ್ರದರ್ಶನ ಉದ್ಘಾಟನಾ ಸಮಾರಂಭ ಆಯೋಜಿಸಿ ಅತಿಥಿ ಗಣ್ಯರು ಮಾತನಾಡುತ್ತಿದ್ದ ಸಂದರ್ಭವನ್ನು ನೆನಪಿಸಿದರು. ರಾಜಾಸೀಟ್ನಲ್ಲಿ ಇಲಾಖೆಯ ಪುಷ್ಪ ಕುಂಡಗಳೊಂದಿಗೆ ವಿಶೇಷವಾಗಿ ಮಹಿಳೆಯರು ತಮ್ಮ ಮನೆಗಳಲ್ಲಿ ಬೆಳೆದಿರುವ ಆಕರ್ಷಕ ಹೂ ಕುಂಡಗಳು, ಹಣ್ಣು, ತರಕಾರಿ ಇತ್ಯಾದಿ ಪ್ರದರ್ಶನ ಏರ್ಪಡಿಸಿ ಬಹುಮಾನ ನೀಡುತ್ತಿದ್ದುದಾಗಿ ಉಲ್ಲೇಖಿಸಿದರು.
ಪ್ರಸಕ್ತ ಕೇವಲ ಆಡಳಿತ ವ್ಯವಸ್ಥೆಗೆ ಸೀಮಿತ ಪ್ರದರ್ಶನ ರೂಪಿಸಿ, ಜನಪ್ರತಿನಿಧಿಗಳಿಗೆ ವೇದಿಕೆ ಕೂಡ ಕಲ್ಪಿಸದೆ ತೋರಿಕೆಗೆ ಕಾರ್ಯಕ್ರಮ ಆಯೋಜಿಸಿರುವದು ಬೇಸರ ತಂದಿದೆ ಎಂದು ವಿಷಾದಿಸಿದರು.