* ಸಿದ್ದಾಪುರ, ಮಾ. 9 : ಕಾಫಿ ತೋಟದಲ್ಲಿ ಕೆಲಸ ಮುಗಿಸಿ, ಅಂಗಡಿಗೆಂದು ತೆರಳಿ ಲೈನ್‍ಮನೆಗೆ ವಾಪಸ್ಸಾಗುತ್ತಿದ್ದ ಕಾರ್ಮಿಕನೋರ್ವನನ್ನು ಕಾಡಾನೆಯೊಂದು ಅಡ್ಡಗಟ್ಟಿ ನೆಲಕ್ಕೆ ಬಗೆದು, ಕಾಫಿ ಗಿಡದಿಂದ ಬಡಿದು ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಇಲ್ಲಿಗೆ ಸನಿಹದ ಚೆನ್ನನಕೋಟೆಯಲ್ಲಿ ಸಂಭವಿಸಿದೆ.

ಚೆನ್ನನಕೋಟೆಯ ಬಿ.ಕಾನನ್‍ಕಾಡು ತೋಟದ ಕಾರ್ಮಿಕ, ಮೂಲತಃ ಕೆ.ಆರ್. ನಗರದ ರುದ್ರಪ್ಪ (55) ಎಂಬಾತ ಇಂದು ಸಂಜೆ ತೋಟ ಕೆಲಸ ಮುಗಿಸಿ ಸಾಮಗ್ರಿಕೊಳ್ಳಲೆಂದು ಅಂಗಡಿಗೆ ತೆರಳಿದ್ದರು. ಪ್ರತಿನಿತ್ಯ ಅಂಗಡಿಗೆ ತೆರಳಿ ಬರುವಂತೆಯೇ ಇಂದು ಕೂಡ ಬರುತ್ತಿದ್ದಾಗ

(ಮೊದಲ ಪುಟದಿಂದ) ಇನ್ನೇನು ಲೈನ್‍ಮನೆ ತಲಪುವಷ್ಟರಲ್ಲಿ ಒಂಟಿ ಸಲಗ ಧಾಳಿ ಮಾಡಿದೆ. ರುದ್ರಪ್ಪನನ್ನು ಎಳೆದಾಡಿ, ಗುಂಡಿಯೊಂದಕ್ಕೆ ಎಸೆದಿದೆ. ಅಷ್ಟಕ್ಕೂ ಸುಮ್ಮನಾಗದೆ ಅಲ್ಲೇ ಇದ್ದ ಕಾಫಿ ಗಿಡವನ್ನು ಕಿತ್ತು ಅದರಲ್ಲಿ ರುದ್ರಪ್ಪನನ್ನು ಬಡಿದು ಸಾಯಿಸಿದೆ. ತಲೆಗೆ ತೀವ್ರ ಗಾಯ, ಕೈ ಕಾಲು ಮುರಿದು ರುದ್ರಪ್ಪ ಕೊನೆಯುಸಿರೆಳೆದಿದ್ದಾರೆ. ಲೈನ್ ಮನೆಯಿಂದ ಈ ದೃಶ್ಯವನ್ನು ಕಣ್ಣಾರೆ ಕಂಡ ರುದ್ರಪ್ಪ ಅವರ ಪುತ್ರಿ ಹೇಮಾ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಆನೆಯ ಬೊಬ್ಬೆ ಕೇಳಿ ತಂದೆ ಬಂದಿಲ್ಲವೆಂದು ಹೊರ ಬಂದು ನೋಡಿದಾಗ ಈ ದೃಶ್ಯ ಗೋಚರಿಸಿದ್ದಾಗಿ ಹೇಳಿದ್ದಾಳೆ.

ಮಧ್ಯಾಹ್ನ ಧಾಳಿ

ಇದೇ ಆನೆ ಮಧ್ಯಾಹ್ನ ಕೂಡ ಧಾಳಿ ನಡೆಸಿರುವ ಬಗ್ಗೆ ತಿಳಿದು ಬಂದಿದೆ. ಇಂದು ಮಧ್ಯಾಹ್ನ ಸೆಸ್ಕ್ ಸಿಬ್ಬಂದಿ ಸಾಗರ್ ಎಂಬವರು ಪಕ್ಕದ ತೋಟದ ಕಾರ್ಮಿಕರಾದ ಅಜಯ್ ಹಾಗೂ ರವಿ ಅವರುಗಳೊಂದಿಗೆ ವಿದ್ಯುತ್ ಮಾರ್ಗ ಪರಿಶೀಲನೆ ಮಾಡುತ್ತಾ ಇದೇ ತೋಟದೊಳಗೆ ಸಾಗುತ್ತಿದ್ದ ಸಂದರ್ಭ ಆನೆ ಇವರುಗಳನ್ನು ಬೆನ್ನಟ್ಟಿದೆ. ಆನೆಯನ್ನು ಕಂಡು ಓಡಿದ ಈ ಮೂವರು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಓಡುವ ರಭಸದಲ್ಲಿ ಬಿದ್ದ ಅಜಯ್‍ಗೆ ಗಾಯಗಳಾಗಿವೆ. ಇದೇ ರೋಷದಲ್ಲಿದ್ದ ಆನೆ ರಾತ್ರಿ 8 ಗಂಟೆ ವೇಳೆ ಅಡ್ಡಸಿಕ್ಕ ರುದ್ರಪ್ಪನನ್ನು ಹತ್ಯೆಗೈದಿದೆಯೆಂದು ಕಾರ್ಮಿಕರು ಹೇಳುತ್ತಾರೆ. ಸದ್ಯಕ್ಕೆ ಈ ತೋಟದಲ್ಲಿ 20ಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿರುವದಾಗಿ ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣಿ, ಅರಣ್ಯಾಧಿಕಾರಿ ಶ್ರೀನಿವಾಸ್, ಗ್ರಾ.ಪಂ. ಸದಸ್ಯರುಗಳಾದ ವಿಜಯ್, ಮೇಕೇರಿರ ಅರುಣ್ ಅವರುಗಳು ಭೇಟಿ ನೀಡಿದ್ದರು. ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಶವಾಗಾರಕ್ಕೆ ಸಾಗಿಸಲಾಗಿದೆ.

- ಅಂಚೆಮನೆ ಸುಧಿ