ಕೂಡಿಗೆ, ಮಾ. 9: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಎರಡೂವರೆ ವರ್ಷ ಕಳೆದು, ಶೇ. 30 ರಷ್ಟು ಕಾಮಗಾರಿ ನಡೆದು ಇದೀಗ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿ ರಾಜ್ಯಮಟ್ಟದ ಮೇಲಾಧಿಕಾರಿಗಳಿಂದ ಗುತ್ತಿಗೆದಾರರನಿಗೆ ಸೂಚನೆ ಮೇರೆ ಕಾಮಗಾರಿ ನಡೆಯುತ್ತಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ದೆಹಲಿಯ ಸಿನ್ಹೋ ಕೋಡ್ ಕಂಪೆನಿಯವರು ಟೆಂಡರ್ ಪಡೆದಿದ್ದು, ಟೆಂಡರ್ ಪಡೆದ ಸಂದರ್ಭ ಅಂದಾಜು ರೂ. 4.5 ಕೋಟಿ ಮಂಜೂರಾಗಿತ್ತು. ಎರಡು ವರ್ಷದ ನಂತರ ಹಾಕಿ ಟರ್ಫ್ ತಳಬಾಗಕ್ಕೆ ಡಾಂಬರೀಕರಣ ನಡೆಯುತ್ತಿದೆ. ಡಾಂಬರೀಕರಣದ ಸಂದರ್ಭ ಗುತ್ತಿಗೆದಾರ, ಇಂಜಿನಿಯರ್ ಆಗಲಿ ಅಥವಾ ತಾಂತ್ರಿಕ ಅಧಿಕಾರಿಗಳಾಗಲಿ ಸ್ಥಳದಲ್ಲಿ ಇಲ್ಲದೆ ಕಾರ್ಮಿಕರು ಡಾಂಬರ್ ಮಿಶ್ರಣ ಮಾಡಿ ಮನಬಂದಂತೆ ಹಾಕುತ್ತಿದ್ದಾರೆ. ಅಲ್ಲದೆ, ಇಂಟರ್‍ಲಾಕ್ ಅಳವಡಿಕೆ ಹಾಗೂ ತಡೆಗೋಡೆ ಕೆಲಸ ನಡೆಯುತ್ತಿದ್ದರೂ ಇದರ ಬಗ್ಗೆ ಮಾಹಿತಿ ನೀಡುವವರೂ ಇಲ್ಲ. ಜಿಲ್ಲಾ ಕ್ರೀಡಾ ಇಲಾಖೆ ಸಂಸ್ಥೆಯ ಅಧಿಕಾರಿಗೂ ಈ ಕಾಮಗಾರಿ ನಡೆಯುತ್ತಿರುವ ವಿಷಯ ತಿಳಿದಿಲ್ಲ. ಅಲ್ಲದೆ, ಕ್ರೀಡಾಶಾಲೆಯ ಮುಖ್ಯಸ್ಥರಿಗೂ ಇದರ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಗುತ್ತಿಗೆದಾರ ನೀಡದೆ ಮೂರ್ನಾಲ್ಕು ಕಾರ್ಮಿಕರೊಂದಿಗೆ ಕಾಮಗಾರಿ ನಡೆಸುತ್ತಿರುವದು ಎಷ್ಟು ಸಮಂಜಸ ಎಂದು ಈ ವ್ಯಾಪ್ತಿಯ ಕ್ರೀಡಾಭಿಮಾನಿಗಳ ಅಭಿಪ್ರಾಯವಾಗಿದೆ.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಈ ಶಾಲಾ ಆವರಣಕ್ಕೆ ಇದೀಗ ಹಾಕಿ ಟರ್ಫ್ (ಕೃತಕ ಹುಲ್ಲಿನ ಮೈದಾನ) ದೊರೆತಿದ್ದು, ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮೇಲ್ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಂದರ್ಭ ಹಾಕಿ ಟರ್ಫ್‍ನ ಅವಶ್ಯಕತೆ ಬಹು ಮುಖ್ಯವಾಗಿತ್ತು. ಈ ಮೈದಾನ ನಿರ್ಮಾಣಕ್ಕೆ ಇಲಾಖೆಯ ವತಿಯಿಂದ ಸ್ಥಳ ಹಾಗೂ ವ್ಯವಸ್ಥಿತ ಕಾಮಗಾರಿಯು ನಡೆಯಲು ಅನುಕೂಲ ಮಾಡಿಕೊಡ ಲಾಗಿದ್ದು, ಟರ್ಫ್ ಕಾಮಗಾರಿಯೂ ವ್ಯವಸ್ಥಿತವಾಗಿ ಹಾಗೂ ಉತ್ತಮವಾಗಿ ನಡೆಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕೆಂಬದು ಈ ವ್ಯಾಪ್ತಿಯ ಗ್ರಾಮಸ್ಥರ ಕೋರಿಕೆಯಾಗಿದೆ. ಸಂಬಂಧಪಟ್ಟ ರಾಜ್ಯಮಟ್ಟದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ಕಾಮಗಾರಿಯನ್ನು ಉತ್ತಮವಾಗಿ ನಿರ್ವಹಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
- ಕೆ.ಕೆ. ನಾಗರಾಜ ಶೆಟ್ಟಿ