ಮಡಿಕೇರಿ, ಮಾ. 9: ನಗರದ ರೈಫಲ್ ರೇಂಜ್ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ ನಗರಕ್ಕೆ ಹೊಂದಿಕೊಂಡಂತೆ, ಬಿಡುವಿಲ್ಲದ ದುಡಿಮೆಯಲ್ಲಿರುವ ಪೊಲೀಸ್ ಕುಟುಂಬಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದಿಂದ ವಿಶಾಲ ಕೋಣೆಗಳೊಂದಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇಲ್ಲಿ ಆರು ಪ್ರತ್ಯೇಕ ಮೂರು ಅಂತಸ್ತಿನ ಮಹಲುಗಳನ್ನು (ಅಪಾರ್ಟ್‍ಮೆಂಟ್) ನಿರ್ಮಿಸಿದ್ದು, ಪ್ರತಿಯೊಂದು ಮಹಲುವಿನಲ್ಲಿ ತಲಾ 12 ವಸತಿ ಗೃಹಗಳಂತೆ ಒಟ್ಟು 72 ಕುಟುಂಬಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ.ಮಡಿಕೇರಿಯ ರಾಜಾಸೀಟ್ ಮಾರ್ಗವಾಗಿ ಶ್ರಮಿಸುವ ಬೆಟ್ಟ ಸಾಲುಗಳ ನಡುವೆ ಒಂದೆಡೆ ನಗರಸಭೆಯಿಂದ, ನಿತ್ಯ ಮಡಿಕೇರಿ ನಗರದ ಕಸಕಡ್ಡಿಗಳ ಸಹಿತ ಎಲ್ಲ ಮಾಲಿನ್ಯವನ್ನು ರಾಶಿಗಟ್ಟಲೆ ಹೊತ್ತೊಯ್ದು ಆ ಬೆಟ್ಟ ಸಾಲಿನ ಒಂದೆಡೆ ಸುರಿಯಲಾಗುತ್ತಿದೆ. ಇಲ್ಲಿ ‘ಕಸದಿಂದ ರಸ’ ಎಂಬಂತೆ ಗೊಬ್ಬರ ತಯಾರಿಕಾ ಘಟಕವೂ ನಿರ್ವಹಿಸಲ್ಪಡುತ್ತಿದೆ.

ಈ ನಡುವೆ ರಾಶಿ ರಾಶಿ ಕಸದೊಂದಿಗೆ ಕೊಳೆತ ಮೀನು, ಮಾಂಸ ಇತ್ಯಾದಿ ಎಲ್ಲವೂ ಎಸೆಯಲ್ಪಡುತ್ತಿರುವ ಪರಿಣಾಮ ಸರಿಯಾಗಿ ನಿರ್ವಹಣೆಯಿಲ್ಲದ್ದರಿಂದ, ತೀರಾ ದುರ್ನಾತದೊಂದಿಗೆ ಕ್ರಿಮಿಗಳು, ನೊಣಗಳು ಈ ಪ್ರದೇಶದೆಲ್ಲೆಡೆ ವ್ಯಾಪಿಸಿಕೊಂಡು, ಪೊಲೀಸ್ ವಸತಿ ಗೃಹಗಳ ಸಹಿತ ಇಡೀ ಸುಬ್ರಹ್ಮಣ್ಯನಗರ ಸುತ್ತಮುತ್ತಲಿನಲ್ಲಿ ಹರಡತೊಡಗಿವೆ. ಮನೆಗಳಲ್ಲಿ ಆಹಾರ ಪದಾರ್ಥ ಇತ್ಯಾದಿಗಳನ್ನು ಈ ನೊಣಗಳು ಮುತ್ತಿಕೊಳ್ಳುತ್ತಿರುವ ಪರಿಣಾಮವಾಗಿ ಸಮಾಜದ ರಕ್ಷಣೆಯ ಹೊಣೆ ಹೊತ್ತಿರುವ ಪೊಲೀಸರು ಮತ್ತು ಕುಟುಂಬ ಸದಸ್ಯರ ಸಹಿತ ನಿವಾಸಿಗಳು ಬೇರೆ ದಾರಿಯಿಲ್ಲದೆ ನೊಣಗಳಿಂದ ಕಂಗಾಲಾಗಿದ್ದಾರೆ. ನಗರಸಭೆಯ ಜನಪ್ರತಿನಿಧಿಗಳ ಸಹಿತ ಅಧಿಕಾರಿ ಸಿಬ್ಬಂದಿಗಳೀಗೆ ನೊಣಗಳ ಕಾಟ ತಡೆಗಟ್ಟುವಂತೆ ಮಾಡಿರುವ ಯಾವದೇ ಮನವಿಗಳು ಫಲಿಸದೆ, ಬೇಸತ್ತಿದ್ದಾರೆ. ಈಗಿನ ಬಿಸಿಲಿನ ತಾಪದೊಂದಿಗೆ ನಿತ್ಯ ನೊಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನೊಣಗಳ ಕಾಟ ತಪ್ಪಿಸಿ ಸಾಂಕ್ರಮಿಕ ರೋಗಗಳಿಗೆ ಅಲ್ಲಿನ ನಿವಾಸಿಗಳು ಬಲಿಯಾಗುವ ಮುನ್ನಾ ಕಾಳಜಿ ತೋರಿ ಸೂಕ್ತ ಕ್ರಮ ಕೈಗೊಳ್ಳುವಂತೆ ‘ಶಕ್ತಿ’ ಮುಖಾಂತರ ಒತ್ತಾಯಿಸಿದ್ದಾರೆ.ಅಡುಗೆ ಕೋಣೆ ಹಾಗೂ ಊಟದ ಮೇಜುಗಳಲ್ಲಿ ಯಾವ ಆಹಾರ ಪದಾರ್ಥವಿಟ್ಟರೂ ನೋಣ ಜೇನು ಗೂಡಿನಂತೆ ಮುತ್ತಿಕೊಳ್ಳುವದರಿಂದ, ತಯಾರಿಸಿದ ಆಹಾರ ಅಥವಾ ಹಣ್ಣು ಹಂಪಲು ಇತ್ಯಾದಿ ಸೇವನೆಗೂ ಅಸಹ್ಯಪಟ್ಟುಕೊಳ್ಳುವಂಥ ಪರಿಸ್ಥಿತಿ ಎದುರಾಗಿದೆ ಎಂದು ನೊಂದ ಕುಟುಂಬಗಳು ಅಳಲು ತೋಡಿಕೊಂಡಿವೆ.