ಕುಶಾಲನಗರ, ಮಾ. 9 : ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಸ್ಥಗಿತಗೊಂಡಿದ್ದು ನದಿ ಪಾತ್ರದ ಪಟ್ಟಣ, ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ನೀರಿನ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಜಲ ಮಂಡಳಿ ಅಧಿಕಾರಿಗಳು ನದಿ ಪಾತ್ರದ ಹಲವೆಡೆ ಅಕ್ರಮವಾಗಿ ನಿರ್ಮಿಸಿದ ಬಂಡ್ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಕೊರತೆ ಈ ಬಾರಿ ಮಾರ್ಚ್ ಪ್ರಾರಂಭದಲ್ಲಿಯೇ ಗೋಚರಿಸಿದ್ದು, ಕುಡಿಯುವ ನೀರು ಸರಬರಾಜು ಮಾಡುವ ಬೈಚನಹಳ್ಳಿ ಪಂಪ್‍ಹೌಸ್ ಬಳಿ ನೀರಿನ ಸಂಗ್ರಹದ ಕೊರತೆ ಕಂಡುಬಂದಿದೆ.

ಪಂಪ್‍ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳ ಬಂಡ್ ನಿರ್ಮಿಸಲಾಗಿದ್ದರೂ ಮೇಲ್ಭಾಗದಿಂದ ಬರುವ ನೀರಿನ ಹರಿವಿನ ಪ್ರಮಾಣ ಕ್ಷೀಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜಲ ಮಂಡಳಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವದ ರೊಂದಿಗೆ ಗುಡ್ಡೆಹೊಸೂರು, ಕಾವೇರಿ ನಿಸರ್ಗಧಾಮ ಮುಂತಾದ ಭಾಗಗಳಲ್ಲಿ ಅಕ್ರಮವಾಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಂಡ್‍ಗಳನ್ನು ತೆರವು ಗೊಳಿಸುವ ಕಾರ್ಯ ನಡೆಸಿದರು. ಬೈಚನಹಳ್ಳಿಯಿಂದ ನದಿ ಮೂಲಕ ಸುಮಾರು 10 ಕಿಮೀ ದೂರದ ತನಕ ನದಿಯಲ್ಲಿ ತೆರಳಿದ ಅಧಿಕಾರಿ, ಸಿಬ್ಬಂದಿಗಳು ನದಿಯಲ್ಲಿ ನೀರಿನ ಹರಿವಿಗೆ ಅಡ್ಡಿ ಉಂಟು ಮಾಡುತ್ತಿದ್ದ ಕಟ್ಟೆಗಳ ತೆರವುಗೊಳಿಸಿದರು.

ಕುಶಾಲನಗರ ಪಟ್ಟಣಕ್ಕೆ ಪ್ರಸಕ್ತ ವಾರಕ್ಕೆ ಎರಡು

(ಮೊದಲ ಪುಟದಿಂದ) ಬಾರಿ ಮಾತ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಇದೇ ಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ತಲೆದೋರುವ ಸಾಧ್ಯತೆ ಅಧಿಕ ಎನ್ನಲಾಗಿದೆ.

ಕಾವೇರಿ ನಿಸರ್ಗಧಾಮ ಬಳಿ ಸೇರಿದಂತೆ ವಿವಿಧೆಡೆ ನದಿಗೆ ಅಡ್ಡಲಾಗಿ ನಿರ್ಮಿಸಿ ವಾಣಿಜ್ಯ ಚಟುವಟಿಕೆಗಳಿಗೆ ನೀರನ್ನು ಬಳಸುತ್ತಿರುವದು

ಶುಂಠಿ ಮತ್ತಿತರ ಕೃಷಿ ಚಟುವಟಿಕೆ ಹಾಗೂ ನದಿ ತಟದ ವಸತಿ ಗೃಹಗಳಿಂದ ಪ್ರಸಕ್ತ ನೀರಿನ ಅಭಾವ ತಲೆದೋರಿರುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಅಭಿಯಂತರ ಎಂ.ಆನಂದ್, ಸಿಬ್ಬಂದಿಗಳಾದ ನಂಜುಂಡಸ್ವಾಮಿ, ಕುಮಾರ್, ಭಗವಾನ್ ಹಾಗೂ ದಯಾನಂದ ಪಾಲ್ಗೊಂಡಿದ್ದರು.