ಮಡಿಕೇರಿ, ಮಾ.9 : ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಜಿ.ಪಂ.ಭವನ, ಕೊಡವ ಪಾರಂಪರಿಕ ಕಟ್ಟಡಗಳ ನಿರ್ಮಾಣ ಸ್ಥಳಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಬಳಿಕ ಮಾತನಾಡಿದ ಶಾಸಕರು 39 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್‍ಗೆ ನಿರ್ದೇಶನ ನೀಡಿದರು.

ನಬಾರ್ಡ್‍ನ ನೆರವಿನಲ್ಲಿ ನಿರ್ಮಾಣವಾಗುತ್ತಿರುವ ಕೊಡವ ಹೆರಿಟೇಜ್ ಸೆಂಟರ್‍ಗೆ ಭೇಟಿ ನೀಡಿ 2 ವರ್ಷಗಳಾದರೂ ಕಟ್ಟಡ ಪೂರ್ಣಗೊಂಡಿಲ್ಲ, ನಿರ್ವಹಣೆಯೂ ಸರಿಯಿಲ್ಲ. ಕಟ್ಟಡದ ಪಿಲ್ಲರ್ ಸಹ ಮುರಿದು ಬಿದ್ದಿದೆ. ಇದು ಪ್ರವಾಸೋದ್ಯಮ ಇಲಾಖೆಯ ಅಧೀನಕ್ಕೆ ಬರುತ್ತದೆ. ಅರ್ಜಿ ಸಮಿತಿಯ ಮೂಲಕ ಅಧಿಕಾರಿಗಳನ್ನು ಕರೆಸಿ ಇತ್ಯರ್ಥ ಪಡಿಸುವದಾಗಿ ತಿಳಿಸಿದರು.