ಭಾಗಮಂಡಲ, ಮಾ. 9 : ಶತಮಾನಗಳಿಂದ ಬೆಳೆದು ನಿಂತಿದ್ದ ಬೆಲೆಬಾಳುವ ಮರಗಳನ್ನು ಕಡಿದುರುಳಿಸಿದ ಅರಣ್ಯ ಇಲಾಖೆ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಇಲಾಖೆಯ ದ್ವಿಮುಖ ನೀತಿಯ ಬಗ್ಗೆ ಕಿಡಿ ಕಾರಿದ್ದಾರೆ.
ಇಲ್ಲಿನ ನಾಪೋಕ್ಲು ರಸ್ತೆಯ ಕಾವೇರಿ ನದಿ ತಟದಲ್ಲಿರುವ 75 ಸೆಂಟ್ ಖಾಸಗಿ ಜಾಗವನ್ನು ಸಹಕಾರ ಸಂಘವೊಂದು ಖರೀದಿಸಿದ್ದು, ಜಾಗದಲ್ಲಿ ಹಲಸು, ಮಾವು, ಸಂಪಿಗೆ ಸೇರಿದಂತೆ 15 ಬೆಲೆಬಾಳುವ ಮರಗಳಿದ್ದವು. ಈ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮರಗಳನ್ನು ತೆರವು ಮಾಡಿ ಕೊಡುವಂತೆ ಸಂಘ ಈ ಹಿಂದೆಯೇ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ ಹಿಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಲೆ ಬಾಳುವ ಮರಗಳನ್ನು ಕಡಿಯಲು ಅನುಮತಿ ನೀಡಿರಲಿಲ್ಲ. ಇದೀಗ ಅವರು ವರ್ಗಾವಣೆಯಾಗಿದ್ದು, ಕೂಡಲೇ ಮರ ಕಡಿತಲೆಗೆ ಇಲಾಖೆ ಅನುಮತಿ ನೀಡಿದೆ.
ಅದೂ ಕೂಡ ದಲ್ಲಾಳಿ ಮೂಲಕ. ನಿಯಮಾನುಸಾರ ಮರ ಕಡಿದು ಅರಣ್ಯ ಇಲಾಖೆ ಮರು ಸಂಗ್ರಹಾಗಾರಕ್ಕೆ ಸಾಗಿಸಿ ಅಲ್ಲಿಂದ ಇಲಾಖೆಯ ನಿಯಮದಂತೆ ಹರಾಜು ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಮರ ಕಡಿಯುವ ಅನುಮತಿಯೊಂದಿಗೆ ಅದನ್ನು ಸ್ಥಳದಿಂದಲೇ ಕೊಂಡೊಯ್ಯಲು ದಲ್ಲಾಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಕಾಗದ ಪತ್ರ, ಪ್ರಕ್ರಿಯೆಗಳು ಕ್ಷಿಪ್ರಗತಿಯಲ್ಲಿ ನಡೆದಿರುವದು ಸಂಶಯಕ್ಕೆಡೆಮಾಡಿದೆ.
ಸಾಮಾನ್ಯ ಪ್ರಜೆ ಸ್ವಂತ ಉಪಯೋಗಕ್ಕೆ ಸಣ್ಣ ಮರ ಕಡಿಯಲು ಅನುಮತಿ ನೀಡಲು ಸತಾಯಿಸುವ ಅರಣ್ಯ ಇಲಾಖೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರ ಕಡಿಯಲು ಹಾಗೂ ಸಾಗಾಟ ಮಾಡಲು ಇಷ್ಟು ಶೀಘ್ರ ಅನುಮತಿ ನೀಡಿರುವದು ಗ್ರಾಮಸ್ಥರದಲ್ಲಿ ಅಚ್ಚರಿ ಮೂಡಿಸಿದೆ. ಈ ಹಿಂದೆ ಇದೇ ಜಾಗದಲ್ಲಿ ಜಾಗದ ಮಾಲೀಕ ಸಣ್ಣ ನೇರಳೆ ಮರ ಕಡಿದಿದ್ದ ಸಂದರ್ಭ ಇಲಾಖೆ ಆತನ ಮೇಲೆ ಕ್ರಮಕ್ಕೆ ಮುಂದಾಗಿತ್ತು. ಆದರೆ ಇದೀಗ ಇಷ್ಟೊಂದು ಪ್ರಮಾಣದ ಮರ ಕಡಿದು ಸಾಗಿಸಲು ಕೈಗೊಂಡಿರುವ ಇಲಾಖಾ ಕ್ರಮದ ಬಗ್ಗೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.
ಇಲಾಖೆಯ ಅಧಿಕಾರಿಗಳ ಈ ಕ್ರಮದ ಬಗ್ಗೆ ಮೇಲಧಿಕಾರಿಗಳು, ಜಿಲ್ಲಾಧಿಕಾರಿಗಳು ಪರಿಶೀಲಿಸಿ, ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂಬದು ಗ್ರಾಮಸ್ಥರ ಆಗ್ರಹವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಮರ ಹನನವಾಗಿದ್ದರೂ ಪರಿಸರವಾದಿಗಳೆನಿಸಿಕೊಂಡವರು ಮೌನಿಯಾಗಿರುವ ಬಗ್ಗೆ ಅಸಮಾಧಾನಗೊಂಡಿದ್ದಾರೆ.