ಸೋಮವಾರಪೇಟೆ,ಮಾ.9: ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ತಾ. 11ರಂದು ಬೆಳಿಗ್ಗೆ 10ಗಂಟೆಗೆ ತುಮಕೂರಿನ ಸಿದ್ಧಗಂಗಾ ಕ್ಷೇತ್ರದಲ್ಲಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕೊಡಗಿನಿಂದಲೂ ಸಂಘದ ಸದಸ್ಯರು ತೆರಳಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್. ಬಸವನಗೌಡ ತಿಳಿಸಿದ್ದಾರೆ.

ಗುರುವಂದನಾ ಕಾರ್ಯಕ್ರಮದ ನಂತರ ಸಂಘದ 9ನೇ ರಾಜ್ಯಮಟ್ಟದ ಸಮಾವೇಶ ಹಾಗೂ 2017ರಲ್ಲಿ ಸರಕಾರಿ ಹುದ್ದೆಗೆ ಆಯ್ಕೆಯಾದ ಶರಣ ಅಧಿಕಾರಿಗಳು ಮತ್ತು ನೌಕರರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಸಮಾಜದ ಹಿರಿಯರು ಹಾಗೂ ದಾನಿಗಳಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ಯಾಮನೂರು ಶಿವಶಂಕರಪ್ಪ, ಸಚಿವರಾದ ಈಶ್ವರಖಂಡ್ರೆ, ಗೀತಾ ಮಹದೇವಪ್ರಸಾದ್, ಮಾಜಿ ಸಚಿವರಾದ ವಿ.ಸೋಮಣ್ಣ, ಶಾಸಕ ಶಿವಶಂಕರ್ ಹಾಗೂ ಷಡಕ್ಷರಿ ಉಪಸ್ಥಿತರಿರಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ವೀರಶೈವ, ಲಿಂಗಾಯತ ನೌಕರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಸವನಗೌಡ ತಿಳಿಸಿದ್ದಾರೆ.

ಸಮಾವೇಶಕ್ಕೆ ಹಿಂದಿನ ದಿನ ತೆರಳುವ ನೌಕರರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕೊಡಗು ಜಿಲ್ಲೆಯ ನೌಕರರು ಜಿಲ್ಲಾಧ್ಯಕ್ಷರಾದ ಎಚ್.ಎನ್. ಬಸವನಗೌಡ (ಮೊ. 9900810696) ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ (ಮೊ. 9481059223) ಅವರುಗಳನ್ನು ಸಂಪರ್ಕಿಸಬಹುದಾಗಿದೆ.