ಮಡಿಕೇರಿ, ಮಾ. 9: ಮಡಿಕೇರಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಿದ್ದು, ಜನತೆ ಭಯಬೀತರಾಗಿದ್ದಾರೆ. ಆದರಿಂದ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ತಾಲೂಕು ವ್ಯಾಪ್ತಿಯ ಸಾರ್ವಜನಿಕರು ಬಂದೂಕನ್ನು ಠೇವಣಿ ಮಾಡಲು ಅವಕಾಶ ನೀಡಬಾರದು ಎಂದು ತಾಲೂಕು ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.
ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಇತ್ತೀಚೆಗೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ನಕ್ಸಲ್ ಹಾವಳಿ ಕಂಡು ಬರುತ್ತಿದೆ. ಇದರೊಂದಿಗೆ ಅಸ್ಸಾಂ ಕಾರ್ಮಿಕರು ಹೆಚ್ಚಾಗಿದ್ದು, ಸದಾ ಒಂದಿಲ್ಲೊಂದು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ ರಾಗುತ್ತಿದ್ದಾರೆ. ಜನತೆ ಭಯದಿಂದ ದಿನದೂಡುತ್ತಿದ್ದಾರೆ. ಶೀಘ್ರದಲ್ಲಿಯೇ ಚುನಾವಣೆಯೂ ಆರಂಭವಾಗಲಿದೆ. ನೀತಿ ಸಂಹಿತೆ ಹಿನ್ನೆಲೆ ಕೋವಿಯನ್ನು ಠೇವಣಿ ಇಡಬೇಕಾಗುತ್ತದೆ. ಆದರೆ ಇದಕ್ಕೆ ತಾಲೂಕು ವ್ಯಾಪ್ತಿಯಲ್ಲಿ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದರು. ಇದಕ್ಕೆ ಪಂಚಾಯಿತಿಯ ಇತರೆ ಸದಸ್ಯರು ಕೂಡ ಬೆಂಬಲ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ನಕ್ಸಲ್ ಹಾವಳಿ ಇರುವ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್‍ನಡಿ ಅನುದಾನ ಲಭ್ಯವಿದೆ. ಸಂಪಾಜೆ, ಕಕ್ಕಬ್ಬೆ ಸೇರಿದಂತೆ ಮಡಿಕೇರಿ ತಾಲೂಕಿನ ನಕ್ಸಲ್ ಗ್ರಾಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಒದಗಿಸಬೇಕು ಎಂದು ನಾಗೇಶ್ ಒತ್ತಾಯಿಸಿದರು.
ಸೆಸ್ಕ್ ಅಧಿಕಾರಿಗೆ ತರಾಟೆ: ಹಮ್ಮಿಯಾಲ ಮುಟ್ಲು ಭಾಗದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಸಮಸ್ಯೆಯಿದೆ. ಜನತೆ ಕತ್ತಲಲ್ಲಿ ದಿನಕಳೆಯುವಂತೆ ಆಗಿದೆ ಎಂದು ಸಾಮಾಜಿಕ ನ್ಯಾಯ ಸಮಿತಿ ಸದಸ್ಯ ರಾಯ್ ತಮ್ಮಯ್ಯ ಅಧಿಕಾರಿಯ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಅಧಿಕಾರಿ ದೊಡ್ಡಮನಿ, ಈ ಬಗ್ಗೆ ಯಾವದೇ ದೂರು ಬಂದಿಲ್ಲ ಎಂದು ಹಾರಿಕೆಯ ಉತ್ತರ ನೀಡಲು ಮುಂದಾದರು. ಆದರೆ ಅಧಿಕಾರಿ ಬೇಜಾವಾಬ್ದಾರಿ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ತಾಲೂಕಿನ ವಿವಿಧೆಡೆಯೂ ವಿದ್ಯುತ್ ಸಮಸ್ಯೆ ನಿರಂತರವಾಗಿ ಮುಂದುವರೆಯುತ್ತಿದೆ. ಆದರೆ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೆಳ ಹಂತದ ಅಧಿಕಾರಿಗಳು ತಳಮಟ್ಟದ ಸಮಸ್ಯೆ ಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.
ಪ್ರತಿಕ್ರಿಯಿಸಿದ ಅಧಿಕಾರಿ ದೊಡ್ಡಮನಿ ಮುಟ್ಲು ಹಮ್ಮಿಯಾಲ ಭಾಗದಲ್ಲಿ ರಸ್ತೆ ಅಗಲೀಕರಣವಾಗುತ್ತಿರುವ ಕಾರಣ ಬೆಳಗ್ಗಿನ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದು, ಮುಂದೆ ಸಮಸ್ಯೆಯಾಗದಂತೆ ಕ್ರಮ ವಹಿಸುದಾಗಿ ಭರವಸೆ ನೀಡಿದರು. ಅಧ್ಯಕ್ಷೆ ಶೋಭಾ ಪ್ರತಿಕ್ರಿಯಿಸಿ ಚೆಸ್ಕಾಂ ಇಲಾಖೆಯಲ್ಲಿ ವಿವಿಧ ಯೋಜನೆಗಳು ಇದೆ. ಆದರೆ ಯಾವದು ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಶಿಕ್ಷಕರ ವರ್ಗಾಯಿಸಿ: ಸರಕಾರದ ನೀತಿ ಅನ್ವಯ 10 ವರ್ಷ ಒಂದೇ ಶಾಲೆಯಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರನ್ನು ವರ್ಗಾವಣೆಗೊಳಿಸಬೇಕು ಎಂಬ ನಿಯಮವಿದೆ. ಆದರೂ ಈ ನಿಯಮ ಕೆಲವು ಕಡೆ ಜಾರಿಯಾಗುತ್ತಿಲ್ಲ ಎಂದು ಅಧ್ಯಕ್ಷೆ ಶೋಭಾ ಮೋಹನ್ ಅಸಮಾಧಾನ ವ್ಯಕ್ತ ಪಡಿಸಿದರು. ಕ್ಷೇತ್ರ ಶಿಕ್ಷಣ ಅಧಿಕಾರಿ ಗಾಯತ್ರಿ ಪ್ರತಿಕ್ರಿಯಿಸಿ ಸರಕಾರದ ನಿಯಮದ ಅನ್ವಯ ಮಾತ್ರ ವರ್ಗಾವಣೆ ಮಾಡಲಾಗುತ್ತಿದೆ ಎಂದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಶಿಕ್ಷಕರ ವಿರುದ್ಧ ದೂರುಗಳಿದ್ದರೂ ಕೂಡ ಅಂತಹ ಶಿಕ್ಷಕರನ್ನು ಇತರೆಡೆ ವರ್ಗಾವಣೆ ಮಾಡಿ ಎಂದು ಸೂಚಿಸಿದರು.
ಪ್ರವೇಶ ಪ್ರಕ್ರಿಯೆ ಆರಂಭ: ಮಡಿಕೇರಿ ತಾಲೂಕಿನಲ್ಲಿ 2018-19 ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರವೇಶ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ನಡೆಸಲಾಗುತ್ತದೆ. ಫೆ. 20 ರಿಂದ ಮಾ. 20 ರೊಳಗೆ ದಾಖಲಾತಿ ಕೋರಿ ಪೋಷಕರು ತಾವು ಇಚ್ಚಿಸಿರುವ ಶಾಲೆಗಳಿಗೆ ಆನ್‍ಲೈನ್ ಮೂಲಕ ಅಗತ್ಯ ದಾಖಲಾತಿಗಳ ಸಮೇತ ಗರಿಷ್ಠ 5 ಶಾಲೆಗಳಿಗೆ ಆದ್ಯತೆ ಗುರುತಿಸಿ ಒಂದು ಅರ್ಜಿ ಸಲ್ಲಿಸಬಹುದು ಎಂದು ಬಿಇಓ ಸಭೆಯ ಗಮನಕ್ಕೆ ತಂದರು.
ಎಲ್‍ಕೆಜಿ ಪ್ರವೇಶಕ್ಕೆ ಪರಿಶಿಷ್ಟ ಜಾತಿ 31 ಪರಿಶಿಷ್ಟ ಪಂಗಡ-06 ಒಬಿಸಿ -62 ಒಟ್ಟು 99. 1ನೇ ತರಗತಿಗೆ ಪರಿಶಿಷ್ಟ ಜಾತಿ -51 ಪರಿಶಿಷ್ಟ ಪಂಗಡ -12 ಒಬಿಸಿ -100 ಒಟ್ಟು 163 ಸೀಟುಗಳು ಲಭ್ಯವಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ತಿಳಿಸಿದರು. ಅಧ್ಯಕ್ಷೆ ಶೋಭಾ ಪ್ರತಿಕ್ರಿಯಿಸಿ ಆರ್‍ಟಿಈ ಕಾಯಿದೆ ಬಡಮಕ್ಕಳಿಗೆ ದೊರೆಯುವಂತೆ ಆಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಮಾತೃಪೂರ್ಣ ಯೋಜನೆ: ಮಡಿಕೇರಿ ತಾಲೂಕಿನಲ್ಲಿ ಮಾತೃ ಪೂರ್ಣ ಯೋಜನೆ ಕೇವಲ 20 ರಷ್ಟು ಮಾತ್ರ ಯಶಸ್ವಿಯಾಗಿದೆ. ಆದರೆ ಜಿಲ್ಲಾಧಿಕಾರಿಗಳು ಯೋಜನೆಯನ್ನು ಜಾರಿಗೊಳಿಸಿ ಎನ್ನುತ್ತಾರೆ. ಆದರೆ ಇದಕ್ಕೆ ಯಾವದೇ ರೀತಿಯ ಸ್ಪಂದನ ಇಲ್ಲ. ಆದರೆ ಮಾತೃ ವಂದನೆ ಯೋಜನೆ ಪ್ರಗತಿಯಲ್ಲಿದೆ ಎಂದು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ದಮಯಂತಿ ಸಭೆಯ ಗಮನಕ್ಕೆ ತಂದರು.
ಇದೇ ಸಂದರ್ಭ ಮೀನುಗಾರಿಕೆ ಇಲಾಖೆಯಡಿ 2017-18 ನೇ ಸಾಲಿನಲ್ಲಿ ಲಭ್ಯವಿರುವ ಯೋಜನೆಯಡಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಮೀನುಗಾರಿಕೆ ಕಿಟ್ ವಿತರಿಸಲಾಯಿತು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸಂತು ಸುಬ್ರಮಣಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಕುಮಾರ್, ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.