ಗೋಣಿಕೊಪ್ಪಲು,ಮಾ. 7: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಯ ಮಾಸಿಕ ಸಭೆಯು ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಕಸವಿಲೇವಾರಿ, ಶೇ.25ರ ಅನುದಾನದ ಬಳಕೆ, ಗುಜರಿ ವಸ್ತುಗಳ ವಿಲೇವಾರಿ, ನೂತನ ಕುಡಿಯುವ ನೀರಿನ ನಲ್ಲಿಗೆ ಅನುಮತಿ ನಿರಾಕರಣೆ, ನಗರದಲ್ಲಿ ಅನಧಿಕೃತ ಫ್ಲೆಕ್ಸ್ ತೆರವು, ಬಸವೇಶ್ವರ ದೇವಸ್ಥಾನದ ಸಮೀಪ ಸೂಚನಾ ಫಲಕ ಅಳವಡಿಕೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಚರ್ಚೆ ಮಧ್ಯೆ ಬಿಜೆಪಿ ಬೆಂಬಲಿತ ಸದಸ್ಯರು ಆಕ್ರೋಶ ಗೊಂಡು ಸಭೆ ಮಧ್ಯದಿಂದಲೇ ಹೊರ ನಡೆದ ಘಟನೆ ನಡೆದಿದೆ.

ಈ ಹಿಂದೆ ನ್ಯಾಯಾಲಯದ ಮುಂಭಾಗವಿರುವ ಕಸದ ರಾಶಿಯ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ ಹಿನ್ನೆಲ್ಲೆಯಲ್ಲಿ ಈ ಜಾಗದ ಸುತ್ತಲೂ ತಗಡು ಶೀಟಿನ ಬೇಲಿ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿ ರುವ ಕಿರಿಕಿರಿಯನ್ನು ತಪ್ಪಿಸುವಂತೆ ಸದಸ್ಯ ಚಂದ್ರ ಸಿಂಗ್ ಮನವಿ ಮಾಡಿದರು. ಇವರ ಮನವಿಗೆ ಸ್ಪಂದಿಸಿದ ಅಧ್ಯಕ್ಷೆ ಕೂಡಲೇ ಪಿಡಿಒ ಸುರೇಶ್ ಅವರಿಗೆ ನಿರ್ದೇಶನ ನೀಡಿದರು.

6 ಬ್ಲಾಕ್‍ಗಳಲ್ಲಿ ನಿಯಮದಂತೆ ಶೇ.25ರ ಅನುದಾನದಲ್ಲಿ ಕೆಲಸ ನಿರ್ವಹಿಸುವಂತೆ ಸದಸ್ಯ ಅಡ್ಡಂಡ ಸುನೀಲ್ ಪ್ರಸ್ತಾಪಿಸಿದರು. ಇವರ ಮಾತಿಗೆ ಅಧ್ಯಕ್ಷೆ ಒಪ್ಪಿಗೆ ಸೂಚಿಸಿದರು. ಕಳೆದ 15 ವರ್ಷಗಳಿಂದ ಪಂಚಾಯಿತಿ ಯಲ್ಲಿರುವ ಹಳೆಯ ವಸ್ತುಗಳನ್ನು ಟೆಂಡರ್ ಮೂಲಕ ಹರಾಜು ಮಾಡಲು ಅನುಮತಿ ನೀಡುವಂತೆ ಪಿಡಿಒ ಸುರೇಶ್ ಸಭೆಗೆ ತಿಳಿಸಿದರು. ಸಭೆಯು ಒಮ್ಮತದ ನಿರ್ಧಾರ ಕೈಗೊಂಡು ಟೆಂಡರ್ ಕರೆದು ಪಾರದರ್ಶಕವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ಇರುವದರಿಂದ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ನೂತನವಾಗಿ ಪೈಪ್ ಅಳವಡಿಸಲು ಯಾರಿಗೂ ಅನುಮತಿ ನೀಡದಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಗರದಲ್ಲಿ ಅನಧಿಕೃತ ಫ್ಲೆಕ್ಸ್‍ಗಳು ಅಳವಡಿಸಿರುವದರಿಂದ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ ಇದನ್ನು ತಕ್ಷಣ ತೆರವುಗೊಳಿಸಿ ಸಂಬಂದಪಟ್ಟವರಿಗೆ ದಂಡ ವಿಧಿಸುವಂತೆ ಚಂದ್ರ ಸಿಂಗ್ ಸಭೆಯ ಗಮನ ಸೆಳೆದರು. ಕ್ರಮ ಕೈಗೊಳ್ಳುವದಾಗಿ ಅಧ್ಯಕ್ಷೆ ಉತ್ತರಿಸಿದರು.

ಬಸವೇಶ್ವರ ದೇವಾಲಯ ಸುತ್ತಲೂ ಸೂಚನಾ ಫಲಕ ಅಳವಡಿಸಿ ವಾಹನ ಚಾಲಕರಿಗೆ ಅನುಕೂಲ ಕಲ್ಪಿಸಬೇಕೆಂದು ಸದಸ್ಯರು ಸೂಚಿಸಿದನ್ನು ಸಭೆ ಒಪ್ಪಿಗೆ ನೀಡಿ ಕೂಡಲೇ ಕೆಲಸ ಮಾಡುವಂತೆ ಪಿಡಿಒ ಅವರಿಗೆ ನಿರ್ದೇಶನ ನೀಡಲಾಯಿತು. ಚುನಾವಣೆಯ ಸಂದರ್ಭ ಇರುವದರಿಂದ ಬೂತ್ ಇರುವ ಕೊಠಡಿಗಳಿಗೆ ಬಾಗಿಲು, ಕಿಟಕಿ, ಶೌಚಾಲಯ ದುರಸ್ತಿ ಹಾಗೂ ವಿಕಲ ಚೇತನರಿಗೆ ರ್ಯಾಂಪ್ ಅಳವಡಿಸಲು ಅನುಮತಿ ನೀಡಲಾಯಿತು.

ಪಂಚಾಯಿತಿ ಪಿಡಿಒ ಸುರೇಶ್ ಸದಸ್ಯರ ಗಮನಕ್ಕೆ ಬಾರದೇ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಕಾಮಾಗಾರಿ ಆರಂಭಿಸದೆ ಹಣ ಡ್ರಾ ಮಾಡಲಾಗಿದೆ ಎಂದು ಸದಸ್ಯ ಬೊಟ್ಟಂಗಡ ದಶಮಿ ಅವರು ಅಧ್ಯಕ್ಷರ ಗಮನ ಸೆಳೆದರು. ಇವರ ಮಾತಿಗೆ ಸದಸ್ಯರಾದ ಕಾವ್ಯ ಕಾವೇರಮ್ಮ, ಮೂಕಳೇರ ಲಕ್ಷ್ಮಣ್, ಅಮ್ಮತ್ತೀರ ಸುರೇಶ್, ಜಯಲಕ್ಷ್ಮಿ ಧ್ವನಿಗೂಡಿಸಿದರು. ಅಧ್ಯಕ್ಷರ ಗಮನಕ್ಕೆ ಬಾರದೇ ಈ ರೀತಿ ನಡೆಯುತ್ತಿದೆಯೇ ನಮ್ಮ ಪ್ರಶ್ನೆಗೆ ಉತ್ತರಿಸಬೇಕೆಂದು ಸದಸ್ಯೆ ದಶಮಿ ಪಟ್ಟುಹಿಡಿದರು. ಈ ಸಂದರ್ಭ ಸಭೆ ಸ್ವಲ್ಪ ಗೊಂದಲದಲ್ಲಿ ಮುಳುಗಿತು. ಪ್ರಶ್ನೆಗೆ ಉತ್ತರಿಸುವಂತೆ ಪಿಡಿಒ ಸುರೇಶ್ ಅವರಿಗೆ ಸೂಚನೆ ನೀಡಿದರು. ಪಿಡಿಒ ಸುರೇಶ್ ಸಮಜಾಯಿಷಿಕೆ ನೀಡುತ್ತಾ, ಸದಸ್ಯ ಅನೀಶ್ ಅವರಿಗೆ ತುರ್ತು ಕುಡಿಯುವ ನೀರಿನ ವಿಷಯದಲ್ಲಿ ಮಾಹಿತಿ ಒದಗಿಸಿದ್ದೆ ಎಂದು ಉತ್ತರಿಸಿದರು. ಇದಕ್ಕೆ ತೃಪ್ತರಾಗದ ದಶಮಿ ಸದಸ್ಯ ಅನೀಶ್ ಅವರನ್ನು ಪ್ರಶ್ನಿಸಿದರು. ಈ ಸಂದರ್ಭ ಅನೀಶ್ ತಾನು ನಿಮಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದೆ; ಕುಡಿಯುವ ನೀರಿನ ವಿಷಯದಲ್ಲಿ ಗುತ್ತಿಗೆದಾರ ಮಂಜು ತಿಂಗಳು ಕಳೆದರೂ ಕಾಮಾಗಾರಿ ಆರಂಭಿಸಿರಲಿಲ್ಲ; ಪಿಡಿಒ ಅವರ ಗಮನಕ್ಕೆ ತಂದು ಪೈಪ್‍ಲೈನ್ ಅಳವಡಿಸಲು ಮುಂದಾಗಿದ್ದೆವು. ಆದರೆ ತಾವುಗಳು ಕಾಮಾಗಾರಿ ನಡೆಸಲು ಅವಕಾಶ ನೀಡಲಿಲ್ಲ ಎಂದು ಸಮಜಾಯಿಷಿಕೆ ನೀಡಿದರು. ಇದರಿಂದ ಅಸಮಾಧಾನಗೊಂಡ ಬಿಜೆಪಿ ಬೆಂಬಲಿತ ಸದಸ್ಯರಾದ ಕಾವ್ಯ ಕಾವೇರಮ್ಮ, ಮೂಕಳೇರ ಲಕ್ಷ್ಮಣ್, ಅಮ್ಮತ್ತೀರ ಸುರೇಶ್, ಜಯಲಕ್ಷ್ಮಿ ಹಾಗೂ ದಶಮಿ ಸಭೆ ಮಧ್ಯದಿಂದಲೆ ಹೊರ ನಡೆದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ ಸುರೇಶ್, ಸದಸ್ಯರುಗಳಾದ ರಶಿಕ, ಯಶೋಧ, ಸುಮತಿ, ಸುಬೈದ, ರೂಪ, ಅಣ್ಣೀರ ಹರೀಶ್, ರಾಜು, ಹಾರೀಸ್, ಆಲೀರ ರಶೀದ್, ಮಂಜು ಟಿ.ಸಿ ಹಾಜರಿದ್ದರು.

-ಜಗದೀಶ್.ಹೆಚ್.ಕೆ.