ಮಡಿಕೇರಿ, ಮಾ. 7 : ಕೊಡವ ಸಮಾಜಗಳ ಒಕ್ಕೂಟದ ಮಾಸಿಕ ಸಭೆ ಬಾಳುಗೋಡು ಕೊಡವ ಸಮಾಜದಲ್ಲಿ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ತಾ. 6ರಂದು ನಡೆಯಿತು. ಸಭೆಯಲ್ಲಿ ಕೊಡಗಿಗೆ ಮಾರಕ ಎನಿಸಬಹುದಾದ ರೈಲ್ವೆ, ಕೊಡವರಿಗೆ ಕೋವಿ ಪರವಾನಗಿ ವಿನಾಯಿತಿಯಲ್ಲಿ ನೀಡುದರಲ್ಲಿ ಆಗುತ್ತಿರುವ ವಿಳಂಬ ಧೋರಣೆ, ರಾಷ್ಟ್ರೀಯ ಹೆದ್ದಾರಿ ಯೋಜನೆಯ ವಿರುದ್ಧ ಕೊಡಗಿನ ಜನತೆ ಒಟ್ಟಾಗಿ ಹೋರಾಟ ನಡೆಸಬೇಕು ಎಂದು ದಾನಿ ಕೆ.ಬಿ ಗಣಪತಿ ಸಲಹೆ ನೀಡಿದರು. ಕೊಡವರ ಒಗ್ಗಟ್ಟಿಗಾಗಿ ಒಕ್ಕೂಟ ಕೆಲಸ ಮಾಡಬೇಕಿದೆ. ಕೊಡಗಿಗೆ ಏನಾದರೂ ಸಮಸ್ಯೆಗಳು ಉಂಟಾದರೆ ಅದನ್ನು ಬಗೆಹರಿಸಲು ಕೊಡವ ಸಮಾಜಗಳ ಒಕ್ಕೂಟದ ಮುಂದಾಳತ್ವದಲ್ಲಿಯೇ ಇತರ ಕೊಡವ ಸಮಾಜಗಳು ಕೂಡ ಮುಂದಾಗಬೇಕಿದ್ದು, ಕೊಡವರ ಸಂಸ್ಕøತಿ, ಆಚಾರ ವಿಚಾರಕ್ಕೆ ಧಕ್ಕೆ ಬಂದಲ್ಲಿ ಒಕ್ಕೂಟ ಒಗ್ಗಟ್ಟಾಗಿ ಹೋರಾಟ ನಡೆಸಲಿ ಎಂದು ಗಣಪತಿ ಹೇಳಿದರು. ಕೊಡಗಿನಲ್ಲಿ ಯಾವದೇ ಯೋಜನೆಯನ್ನು ಜಾರಿಗೆ ತರಬೇಕಾದರೆ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ಕೊಡಗು ಪುಟ್ಟ ಜಿಲ್ಲೆಯಾಗಿದ್ದು, ಸಣ್ಣ ಜನಾಂಗವನ್ನು ಹೊಂದಿದೆ. ಪೂರಕವಲ್ಲದ ಯೋಜನೆಯಿಂದ ಕೊಡಗಿನ ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಅವನತಿಗೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಗಿಗೆ ಯಾವದೇ ಸಮಸ್ಯೆಗಳು ಉಂಟಾದರೂ ಅದನ್ನು ಕೊಡಗಿನ ಎಲ್ಲ ಜನತೆ ಒಟ್ಟಾಗಿ ವಿರೋಧಿಸಬೇಕು. ಎಲ್ಲ ಜನಾಂಗದವರನ್ನು ಸೇರಿಸಿ ಹೋರಾಟ ನಡೆಸಬೇಕು ಎಂದು ಮಾಜಿ ಸಚಿವ ಯಂ.ಸಿ ನಾಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
2019ನೇ ಸಾಲಿನಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಕಪ್ ಸಾರಥ್ಯವನ್ನು ಹರಿಹರ ಮುಕ್ಕಾಟೀರ ಕುಟುಂಬ ವಹಿಸಲಿದೆ. ಬಾಳುಗೋಡುವಿನಲ್ಲಿ ಪಂದ್ಯ ನಡೆಯಲಿದೆ. ಇದಕ್ಕೆ ಬಾಳುಗೋಡುವಿನಲ್ಲಿ 2ನೇ ಮೈದಾನ ವನ್ನು ಸಿದ್ಧಪಡಿಸಲಾಗುತ್ತಿದ್ದು, ಮುಕ್ಕಾಟೀರ ಹಾಕಿ ಹಬ್ಬಕ್ಕೆ ಒಕ್ಕೂಟ ಸಹಕರಿಸುತ್ತಿದೆ. ಈಗಾಗಲೇ ಮೈದಾನದ ಸಿದ್ಧತೆಯಲ್ಲಿಯೂ ಒಕ್ಕೂಟ ಶ್ರಮಿಸುತ್ತಿದ್ದು, ಸಿದ್ಧತೆ ನಡೆಯುತ್ತಿರುವ ಮೈದಾನಕ್ಕೆ ಸಮಾಜದ ಪ್ರಮುಖರು ಭೇಟಿ ನೀಡಿದರು.ಇದೇ ಸಂದರ್ಭ ಕೊಡವ ಸಮಾಜಗಳ ಒಕ್ಕೂಟದ ಮಹಾಸಭೆಯನ್ನು ಹಾಗೂ ಪೊಮ್ಮಕ್ಕಡ ವಿಭಾಗದ ಮಹಾಸಭೆಯನ್ನು ಏ.12 ರಂದು, ಪೊಮ್ಮಕ್ಕಡ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆಯನ್ನು ತಾ. 14 ರಂದು ಬಾಳುಗೋಡು ಕೊಡವ ಸಮಾಜದಲ್ಲಿ ಹಮ್ಮಿಕೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೊಡಗಿನ ಸಮಸ್ಯೆಗಳ ನಿವಾರಣೆಗೆ ಒಕ್ಕೂಟ ಖಂಡಿತವಾಗಿಯೂ ಶ್ರಮಿಸಲಿದೆ. ಒಕ್ಕೂಟದ ಅಂಗ ಸಂಸ್ಥೆ ಪೊಮ್ಮಕ್ಕಡ ಕೂಟ ಸಹ ನಮಗೆ ಸಹಕಾರ ನೀಡುತ್ತಿರುವದು ಉತ್ತಮ ಸಂಗತಿ. ಕೊಡಗಿನ ಸಮಸ್ಯೆಗಳನ್ನು ನಿವಾರಿಸಲು ಒಗ್ಗಾಟ್ಟಾಗಿ ಹೋರಾಟ ನಡೆಸುತ್ತೇವೆ ಎಂದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದ ಬೆಳಿಯಪ್ಪ, ಖಜಾಂಚಿ ಕಾಳೆಯಪ್ಪ, ಜಂಟಿ ಕಾರ್ಯದರ್ಶಿ ಕೊದಂಡ ಸನ್ನು ಇದ್ದರು.