ಕುಶಾಲನಗರ, ಮಾ. 7: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿನ ನಲ್ಲಿಯಲ್ಲಿ ಕೂದಲಿನ ರೀತಿಯ ಅಂಶಗಳು ಹರಿದು ಬಂದ ಪ್ರಕರಣ ಸ್ಥಳೀಯ ಬಡಾವಣೆಯೊಂದರಲ್ಲಿ ಕಂಡುಬಂದಿದೆ. ಇಲ್ಲಿನ ಇಂದಿರಾ ಬಡಾವಣೆಯ ಬಹುತೇಕ ನಲ್ಲಿಗಳಲ್ಲಿ ನೀರಿನೊಂದಿಗೆ ಕಲುಷಿತ ತ್ಯಾಜ್ಯಗಳು ಕಂಡುಬಂದು ನಾಗರಿಕರು ಆಶ್ಚರ್ಯಚಕಿತರಾಗುವದರೊಂದಿಗೆ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಗೋಚರಿಸಿತು.

ಮಧ್ಯಾಹ್ನ ವೇಳೆಗೆ ಕೆಲವು ಮನೆಗಳಲ್ಲಿ ನಲ್ಲಿ ತಿರುಗಿಸಿದ ಸಂದರ್ಭ ಇಂತಹ ಕಲುಷಿತ ವಸ್ತುಗಳು ನಿರಂತರವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಒಳಚರಂಡಿ ಮಂಡಳಿ ಹಾಗೂ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಕಳೆದ ಕೆಲವು ದಿನಗಳಿಂದ ಇದೇ ರೀತಿ ಅಶುದ್ಧ ನೀರು ನಲ್ಲಿಯಲ್ಲಿ ಬರುತ್ತಿರುವದಾಗಿ ಸ್ಥಳೀಯ ನಿವಾಸಿ ರಾಜಣ್ಣ ತಿಳಿಸಿದ್ದಾರೆ.

ವಾರ್ಡ್ ಸದಸ್ಯ ಎಂ.ಎಂ. ಚರಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಚಿಯಂತಹ ವಸ್ತುಗಳು ನಲ್ಲಿಯಲ್ಲಿ ಬರುತ್ತಿದ್ದು, ಇದರಿಂದ ಆರೋಗ್ಯಕ್ಕೆ ಹಾನಿಯುಂಟಾಗುವ ಸಾಧ್ಯತೆಗಳು ಇರುವದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ನೀರು ಸರಬರಾಜು ಮಾಡುವ ಕಛೇರಿ ಆವರಣದ ಶುದ್ಧೀಕರಣ ಘಟಕದಲ್ಲಿ ಸಮರ್ಪಕವಾಗಿ ನೀರಿನ ಶುದ್ಧೀಕರಣ ನಡೆಯುತ್ತಿಲ್ಲ ಎನ್ನುವ ಆರೋಪಗಳು ಕೆಲವು ದಿನಗಳಿಂದ ಕೇಳಿಬರುತ್ತಿದೆ. -ಸಿಂಚು