ವೀರಾಜಪೇಟೆ, ಮಾ. 7: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಸಿಕ ಸಭೆಯನ್ನು ಮುಂದೂಡಿರುವದು ಪಂಚಾಯಿತಿ ಅಧ್ಯಕ್ಷರು ಬಿಜೆಪಿಯ 9 ಮಂದಿ ಸದಸ್ಯರುಗಳ ವಿಶ್ವಾಸವನ್ನು ಕಳೆದು ಕೊಂಡಂತಾಗಿದೆ. ಅಧ್ಯಕ್ಷರು ತಕ್ಷಣ ರಾಜೀನಾಮೆ ನೀಡಬೇಕು ಎಂದು ನಾಮ ನಿರ್ದೇಶನ ಸದಸ್ಯ ಡಿ.ಪಿ. ರಾಜೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜೇಶ್, 15 ದಿನಗಳ ಹಿಂದೆಯೇ ಪಟ್ಟಣ ಪಂಚಾಯಿತಿಯ ಮಾಸಿಕ ಸಭೆಯನ್ನು ತಾ. 3 ರಂದು 11 ಗಂಟೆಗೆ ನಿಗದಿಪಡಿಸಿದ್ದು ನಿಗದಿತ ಅವಧಿಯಲ್ಲಿ ಎಲ್ಲರಿಗೂ ಮೀಟಿಂಗ್ ನೋಟೀಸ್ ಜಾರಿ ಮಾಡಲಾಗಿದೆ ಯಾದರೂ ಉದ್ದೇಶಪೂರ್ವಕವಾಗಿ 9 ಮಂದಿ ಸಭೆಗೆ ಗೈರು ಹಾಜರಾದುದರಿಂದ ಅಧ್ಯಕ್ಷ ಇ.ಸಿ. ಜೀವನ್ ಅವರು ಸಭೆಗೆ ಕೋರಂ ಇಲ್ಲದ ಕಾರಣ ಮುಂದೂಡಿದರು. ಇದರಿಂದ ಸಭೆಗೆ ಹಾಜರಿದ್ದವರು ಅಸಮಧಾನ ಗೊಂಡಿದ್ದಾರೆ ಎಂದರು.
ನಾಮ ನಿರ್ದೇಶನ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಆಯೋಜಿಸುವದೇ ಒಂದೂವರೆ ತಿಂಗಳಿಂದ ಮೂರು ತಿಂಗಳ ಅವಧಿಗೆ, ಇದರಲ್ಲೂ ಬಿ.ಜೆ.ಪಿ. ಸದಸ್ಯರುಗಳು ಮಾತ್ರ ಗೈರು ಹಾಜರಾಗಲು ಕಾರಣವೇನು. ಇವರುಗಳಿಗೆ ಸಭೆಯಲ್ಲಿ ಭಾಗವಹಿಸಲು ಇಷ್ಟವಿರದಿದ್ದರೆ ಮೊದಲೇ ತಿಳಿಸಬಹುದಿತ್ತು. ಈ ಸದಸ್ಯರುಗಳು ಹಾಗೂ ಅಧ್ಯಕ್ಷರಿಗೆ ಪಟ್ಟಣದ ಅಭಿವೃದ್ಧಿ ಕುರಿತು ಕಾಳಜಿ ಇಲ್ಲ ಎನ್ನುವದು ಇದಕ್ಕೆ ಸಾಕ್ಷಿ. ಇದನ್ನು ಕರಾಳ ಸಭೆ ಎಂದೇ ಕರೆಯಬೇಕಾಗಿದೆ ಎಂದು ಆರೋಪಿಸಿದರು.
ಮತ್ತೊಬ್ಬ ನಾಮ ನಿರ್ದೇಶನ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಪಟ್ಟಣ ಪಂಚಾಯಿತಿಯ ಬಿಜೆಪಿ ಆಡಳಿತದಲ್ಲಿ ವೀರಾಜಪೇಟೆ ಪಟ್ಟಣದ ಅಭಿವೃದ್ಧಿ ಶೂನ್ಯ.
ಬಿಜೆಪಿ ಸದಸ್ಯರುಗಳಿಂದ ಅಧಿಕಾರದ ವ್ಯಾಮೋಹ ಮಾತ್ರ ನಡೆದಿದೆ. ಈ ಆಡಳಿತದಿಂದ ವೀರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಇಲ್ಲಿನ ನಾಗರಿಕರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳು ದೊರೆತಿಲ್ಲ. ಬಿ.ಜೆ.ಪಿ. ಸದಸ್ಯರುಗಳ ಗೈರು ಹಾಜರಾತಿಯಿಂದ ಸಭೆ ಮುಂದೂಡಿದ್ದರಿಂದ ಇತರ ಸದಸ್ಯರುಗಳು ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತೊಂದರೆ ಅನುಭವಿಸುವಂತಾಯಿತು ಎಂದು ದೂರಿದರು.
ಕಾಂಗ್ರೆಸ್ ಸದಸ್ಯೆ ಶೀಬಾ ಪೃಥ್ವಿನಾಥ್ ಮಾತನಾಡಿ, ಸಭೆಗೆ ಕೋರಂ ಇಲ್ಲದೆ ಮುಂದೂಡಿ ರುವದರಿಂದ ಒಂದೇ ಪಕ್ಷದ ಆಡಳಿತ ಸದಸ್ಯರುಗಳ ಮೇಲೆ ಅಧ್ಯಕ್ಷರಿಗೆ ಎಷ್ಟು ಹಿಡಿತವಿದೆ ಎಂದು ಗೊತ್ತಾಗುತ್ತದೆ. ಈ ಕಾರಣಕ್ಕಾಗಿ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಹೇಳಿದರು.