ಗೋಣಿಕೊಪ್ಪಲು, ಮಾ. 7: ಬೇಟೆ ಪ್ರಾಣಿಗಳಾದ ಹುಲಿಗಳ ಪ್ರಪಂಚದಲ್ಲಿ ಶಕ್ತಿವಂತನಿಗೇ ಉಳಿಗಾಲ. ಇಲ್ಲವೇ ಪಲಾಯನ ಮಾಡಬೇಕು. ಸುಮಾರು 643 ಚ.ಕಿ.ಮೀಟರ್ ವಿಸ್ತೀರ್ಣದ ನಾಗರಹೊಳೆ ಅಭಯಾರಣ್ಯ ಇದೀಗ ಹುಲಿ ಸಂರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡ ನಂತರ ಅವುಗಳ ಸಂತತಿಯೂ ಅಧಿಕವಾಗತೊಡಗಿದೆ. ನಾಗರಹೊಳೆಯಲ್ಲಿ ಈ ಹಿಂದೆ 60-65ರ ಆಸುಪಾಸಿನಲ್ಲಿ ಹುಲಿಗಳ ಸಂಖ್ಯೆ ಇದ್ದವು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಅವುಗಳ ಸಂಖ್ಯೆ ಇತ್ತೀಚೆಗಿನ ಗಣತಿ ಪ್ರಕಾರ 94ಕ್ಕೇರಿದೆ ಹಾಗೂ ಹುಲಿ ಮರಿಗಳ ಸಂಖ್ಯೆ ಸುಮಾರು 25 ರಷ್ಟಿರಬಹುದು ಎಂದು ಹೇಳಲಾಗುತ್ತಿದೆ. ಹುಲಿಗಳ ಸಾವಿನ ಪ್ರಮಾಣ ಕಡಿಮೆ ಇದೆ. 2016-17 ನೇ ಸಾಲಿನಲ್ಲಿ ಕೇವಲ 5 ಹುಲಿಗಳು ಮಾತ್ರ ಸಾವನ್ನಪ್ಪಿದೆ.
ಅರಣ್ಯ ಇಲಾಖಾಧಿಕಾರಿಗಳ ಪ್ರಕಾರ. ಹುಲಿಗಳು ಜಿಂಕೆ, ಕಡವೆ, ಕಾಡುಕೋಣ ಇತ್ಯಾದಿ ಆಹಾರದ ಪ್ರಾಣಿಗಳಿಗಾಗಿ ಗಡಿ ಗುರುತು ಮಾಡಿಕೊಳ್ಳುತ್ತವೆ. ಆ ಪ್ರದೇಶದಲ್ಲಿ ಇತರೆ ಹುಲಿಗಳಿಗೆ ಪ್ರವೇಶ ನಿಷಿದ್ಧ. ಒಂದೊಮ್ಮೆ ಬೇರೆ ಹುಲಿಗಳು ಬಂದಲ್ಲಿ ಇಲ್ಲಿನ ಹುಲಿರಾಯನೊಂದಿಗೆ ಕಾದಾಟ ನಡೆಸಿ ಗೆಲ್ಲಬೇಕು.ಇಲ್ಲವೆ ಪಲಾಯನ ಅನಿವಾರ್ಯ. ಪಲಾಯನಕ್ಕೆ ಕಾಡೇ ಇಲ್ಲದಾಗ ಹುಲಿಗಳು ಹೊಟ್ಟೆಪಾಡಿಗಾಗಿ ಗ್ರಾಮಗಳಿಗೆ ನುಸುಳುವದು ಸಹಜ. ಒಂದು ಹುಲಿಗೆ ಕನಿಷ್ಟ ತನ್ನ ಆಹಾರವನ್ನು ಕಾಯ್ಧುಕೊಳ್ಳಲು ಸುಮಾರು 13-14 ಚ.ಕಿ.ಮೀಟರ್ ಪ್ರದೇಶದ ಅಧಿಪತ್ಯ ಬೇಕು. ಆದರೆ ಇದೀಗ ಹುಲಿಗಳ ಸಂಖ್ಯೆ ಅಧಿಕಗೊಳ್ಳುತ್ತಿರುವದರಿಂದಾಗಿ ಒಂದು ಹುಲಿಗೆ ಸಿಗುವ ಪ್ರದೇಶ 4 ಚ.ಕೀ.ಮೀಟರ್‍ಗೆ ಕಡಿತಗೊಂಡಂತಾಗಿದೆ.
ಇದರಿಂದ ಕಾಡಿನಲ್ಲಿನ ತನ್ನ ಅಧಿಪತ್ಯ ಸ್ಥಾಪನೆಗೆ ಹುಲಿಗಳ ನಡುವೆ ನಿರಂತರ ಕಾದಾಟ ಅನಿವಾರ್ಯ. ಕಳೆದ ಬಾರಿ ನಿಟ್ಟೂರಿನಲ್ಲಿ ಹಾಗೂ ನಾಗರಹೊಳೆಯಲ್ಲಿ ಎರಡು ಹುಲಿಗಳು ಕಾದಾಟದಿಂದಾಗಿಯೇ ಮೃತಪಟ್ಟಿದ್ದವು. ಒಂದು ಹುಲಿಯ ಕಣ್ಣುಗುಡ್ಡೆಯೂ ಕಿತ್ತು ಬಂದಿತ್ತು. ದೊಡ್ಡ ಬೇಟೆ ಮಾಡಲಾಗದೆ. ನಾಯಿ, ಮುಳ್ಳು ಹಂದಿಯನ್ನು ಬೇಟೆ ಆಡಿ ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯತೆ ಬಂದಿತ್ತು. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹಸುವೊಂದು ಹುಲಿಯೊಂದಿಗೆ ಸೆಣೆಸಿ ಓಡಿ ಹೋಗಿತ್ತು. ಹಸುವಿನ ಕೊಂಬಿನಿಂದಾದ ಗಾಯವೂ ಹುಲಿಯ ಮೈಮೇಲೆ ಕಂಡು ಬಂದಿತ್ತು. ಇದೊಂದು ಅರಣ್ಯ ನ್ಯಾಯ. ಶಕ್ತಿವಂತನಲ್ಲದ ಹಲವು ಹುಲಿಗಳು ಇದೀಗ ನಾಗರಹೊಳೆ, ಬ್ರಹ್ಮಗಿರಿ ವನ್ಯಜೀವಿ ವಲಯದ ಸರಹದ್ದು ಗ್ರಾಮಗಳಿಗೆ ನುಸುಳುತ್ತಿವೆ. ಇದರ ಪರಿಣಾಮವೇ ಇತ್ತೀಚೆಗೆ ವೆಸ್ಟ್ ನೆಮ್ಮಲೆ, ನಲ್ಲೂರು, ಕುಮಟೂರು, ಕೊಟ್ಟಗೇರಿಯಲ್ಲಿ ಹುಲಿ ಪ್ರತ್ಯಕ್ಷವಾಗಿ ಹಸುಗಳನ್ನು ಬಲಿತೆಗೆದುಕೊಳ್ಳಲು ಕಾರಣವೆನ್ನಲಾಗಿದೆ.
ವೆಸ್ಟ್ ನೆಮ್ಮಲೆಯಲ್ಲಿ ಮೂರು ರಾಸುಗಳು ಸಾವನ್ನಪ್ಪಿದ್ದು, ಒಂದು ಹಸುವನ್ನು ಹುಲಿ ತಿಂದು ಹಾಕಿದ್ದು, ಮತ್ತೆ ಪ್ರತ್ಯಕ್ಷವಾಗಿತ್ತು. ನಲ್ಲೂರುವಿನಲ್ಲಿಯೂ ಮೂರು ಹಸುಗಳ ಮೇಲೆ ಧಾಳಿ ಮಾಡಿ ಒಂದನ್ನು ಭಕ್ಷಿಸಿತ್ತು. ಕುಮಟೂರುವಿನಲ್ಲಿ 2 ಹಾಗೂ ಕೊಟ್ಟಗೇರಿಯಲ್ಲಿ ಒಂದು ರಾಸನ್ನು ಹುಲಿ ಬಲಿತೆಗೆದುಕೊಂಡಿತ್ತು. ಇವೆಲ್ಲವೂ ಒಂದೇ ಹುಲಿಯಲ್ಲ.ಕ್ಯಾಮೆರಾ ಟ್ರ್ಯಾಪ್, ಹೆಜ್ಜೆಗುರುತುಗಳ ಮೂಲಕ ಇವು ಬೇರೆ ಬೇರೆ ಹುಲಿಗಳೆಂದು ಅರಣ್ಯ ಇಲಾಖೆ ಅಂದಾಜಿಸಿದೆ. ಹುಲಿ ಗೋಚರವಾದ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಲ್ಲಲ್ಲಿ ಹುಲಿಯ ಜಾಡು ಹಿಡಿದು ಕ್ಯಾಮೆರಾ ಅಳವಡಿಸುತ್ತದೆ. ಇದೀಗ ಕುಮಟೂರು ಹಾಗೂ ನೆಮ್ಮಲೆಯಲ್ಲಿ ಎರಡು ಬೋನುಗಳನ್ನೂ ಇಡಲಾಗಿದೆ.
ಇದರ ನಡುವೆ ಹುಲಿ ಬೋನಿಗೆ ಬಿದ್ದೊಡನೆ ಇಲಾಖೆಗೆ ಮತ್ತೊಂದು ಸಮಸ್ಯೆಯೂ ಇದೆ. ಸೆರೆ ಹಿಡಿದ ಹುಲಿಯನ್ನು ಎತ್ತ ಸಾಗಿಸಬೇಕು? ಎಲ್ಲಿ ಬಿಡಬೇಕು? ಈ ಬಗ್ಗೆ ರಾಜ್ಯ ವನ್ಯಜೀವಿ ಪರಿಪಾಲಕರಿಂದ ಕಡ್ಡಾಯ ಅನುಮತಿ ಹೊಂದಬೇಕು.
ಪೆÇನ್ನಂಪೇಟೆ ವಲಯಾರಣ್ಯಾಧಿಕಾರಿ ಗಂಗಾಧರ್ ಅವರ ಪ್ರಕಾರ ಹುಲಿ ಸೆರೆಗೆ ಅಗತ್ಯ ಸಿಬ್ಬಂದಿ ಇದ್ದಾರೆ. ತುರ್ತು ಸ್ಪಂದನೆ ನೀಡಲಾಗುತ್ತಿದೆ. ನಲ್ಲೂರುವಿನಲ್ಲಿನ ಹುಲಿ ಧಾಳಿಯಲ್ಲಿ ರಾಸುಗಳ ಮಾಲೀಕರಿಗೆ ರೂ.10 ಸಾವಿರ ಚೆಕ್ ನೀಡಲಾಗಿದೆ. ಕರು ಸತ್ತರೂ ರೂ. 10 ಸಾವಿರ ನೀಡಲಾಗುತ್ತಿದೆ. ಕಾನೂನಿನ ಪ್ರಕಾರ ಅದಕ್ಕಿಂತಲೂ ಅಧಿಕ ಪರಿಹಾರ ಮೊತ್ತ ನೀಡಲಾಗುವದಿಲ್ಲ. ವೆಸ್ಟ್ ನೆಮ್ಮಲೆ ಮತ್ತು ಕೆಲವು ಕಡೆ ವನ್ಯಜೀವಿ ವಿಭಾಗ, ಮೀಸಲು ಅರಣ್ಯ ಎಂಬ ವಿಭಾಗದಿಂದಾಗಿ ಪರಿಹಾರ ನೀಡಲು ವಿಳಂಬವಾಗಿದೆ. ವನ್ಯಜೀವಿ ವಲಯದಿಂದ ಕನಿಷ್ಟ 5 ಕಿ.ಮೀ. ಹೊರಕ್ಕೆ ಹುಲಿ ಬಂದು ಜಾನುವಾರನ್ನು ಸಾಯಿಸಿದ್ದಲ್ಲಿ ವನ್ಯಜೀವಿ ವಿಭಾಗದಿಂದಲೇ ತುರ್ತು ಪರಿಹಾರ ನೀಡಬಹುದಾಗಿದೆ ಎಂದರು.
ಇದೀಗ ಹುಲಿಯನ್ನು ಸೆರೆ ಹಿಡಿದರೂ ಅವುಗಳ ಸಂತತಿ ಹೆಚ್ಚಳಗೊಂಡಿರುವದರಿಂದಾಗಿ ಮತ್ತೊಂದು ಹೊಸ ಹುಲಿ ಅದೇ ಗ್ರಾಮಕ್ಕೆ ನುಸುಳುವ ಸಾಧ್ಯತೆ ಇದೆ. ಇದು ಇಲಾಖೆಗೆ ತಲೆನೋವಿನ ವಿಚಾರವಾಗಿದೆ. ಕಾಡಿನಿಂದ ಹೊರಬಿದ್ದ ಹುಲಿಗಳು ದೇವರಕಾಡು ಇತ್ಯಾದಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುತ್ತವೆ ಎಂದು ವಿವರಿಸಿದರು
ಪರಿಹಾರ ವಿತರಣೆ
ಪೆÇನ್ನಂಪೇಟೆ ಅರಣ್ಯ ವಲಯ ವ್ಯಾಪ್ತಿಯ ಕೈಕೇರಿ, ಕೊಂಗಣ, ಬಿ. ಶೆಟ್ಟಿಗೇರಿ, ವಿ. ಬಾಡಗ ಹಾಗೂ ಹಾತೂರು ವ್ಯಾಪ್ತಿಯಲ್ಲಿ ಆನೆ, ಹುಲಿ ಇತ್ಯಾದಿ ವನ್ಯಪ್ರಾಣಿಗಳಿಂದ ಸಂತ್ರಸ್ತರಾದವರಿಗೆ ಶೇ. 90 ರಷ್ಟು ಪರಿಹಾರ ವಿತರಣೆ ಮಾಡಲಾಗಿದ್ದು, ಉಳಿದವರಿಗೆ ಪರಿಹಾರ ವಿತರಣೆ ಪ್ರಗತಿಯಲ್ಲಿದೆ ಎಂದು ಆರ್‍ಎಫ್‍ಓ ಗಂಗಾಧರ್ ವಿವರಿಸಿದರು. ಸುಮಾರು 85 ಅರ್ಜಿಗಳು ಬಂದಿದ್ದು ಇನ್ನು ಕೆಲವು ಅರ್ಜಿಗಳು ಇತ್ಯರ್ಥವಾಗಬೇಕಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಈ ಭಾಗದ ರೈತರಿಗೆ ಸುಮಾರು ರೂ. 7 ಲಕ್ಷ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಒಂದೆಡೆ ಹುಲಿಗಳಿಗೆ ತಮ್ಮ ಅಧಿಪತ್ಯ ಸ್ಥಾಪಿಸಲು ಕಿರಿದಾಗುತ್ತಿರುವ ಅರಣ್ಯ ಪ್ರದೇಶ. ಗೋವನ್ನು ಕಳೆದುಕೊಂಡು ಅತ್ತ ಪರಿಹಾರ ಮೊತ್ತದಲ್ಲಿಯೂ ನಷ್ಟ ಅನುಭವಿಸುತ್ತಿರುವ ರೈತಾಪಿ ವರ್ಗ. ಮತ್ತೊಂದೆಡೆ ಹುಲಿಯ ಜಾಡನ್ನು ಅರಸಿ, ಗ್ರಾಮಸ್ಥರಲ್ಲಿ ಧ್ಯೆರ್ಯ ತುಂಬಲು ನಿರಂತರ ಹೆಣಗಾಡುತ್ತಿರುವ ಇಲಾಖಾ ಸಿಬ್ಬಂದಿ ವರ್ಗ. ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರೋಪಾಯ ಕಂಡುಕೊಳ್ಳಬೇಕಾದ ಅಗತ್ಯ ಕಂಡು ಬಂದಿದೆ.