ಭಾಗಮಂಡಲ, ಮಾ. 7: ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ತಾ. 9 ರಿಂದ ನಡೆಯಲಿದ್ದು ಉತ್ಸವಕ್ಕೆ ಗ್ರಾಮದ ಜನತೆ ಸಜ್ಜಾಗುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ‘ಚಿನ್ನತಪ್ಪ’ ಹಬ್ಬದಲ್ಲಿ ಶ್ರೀಕೃಷ್ಣನದು ಎನ್ನಲಾದ ಕೊಳಲಿಗೆ ಪೂಜೆ ಸಲ್ಲಿಸುವದೇ ‘ಚಿನ್ನತಪ್ಪ’ ಹಬ್ಬದ ವಿಶೇಷತೆಯಾಗಿದೆ.

ಅಯ್ಯಂಗೇರಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ಚಿನ್ನತಪ್ಪ’ ಹಬ್ಬದಿಂದ ಊರು ಜನಮನ ಸೆಳೆದಿದೆ. ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣ ದೇಗುಲವಿರುವ ಗ್ರಾಮ ಎಂಬ ಹೆಗ್ಗಳಿಕೆಯೂ ಇಲ್ಲಿಗಿದೆ. ಗೊಲ್ಲ ಜನಾಂಗದವರು ನಡೆಸುವ ಈ ಹಬ್ಬ ಪ್ರತಿವರ್ಷ ಬೇಸಿಗೆಯಲ್ಲಿ ಸಂಪ್ರದಾಯದೊಂದಿಗೆ ನೆರವೇರುತ್ತದೆ.

ಈ ಹಬ್ಬದಲ್ಲಿ ಕೊಳಲನ್ನು ಎತ್ತಿಕೊಳ್ಳುವವನಿಗೆ ಶ್ರೀಕೃಷ್ಣ ಪರಮಾತ್ಮನದು ಎನ್ನಲಾದ ಆಭರಣ ತೊಡಿಸಲಾಗುತ್ತದೆ. ಎತ್ತು ಪೋರಾಟದ ಎತ್ತುಗಳನ್ನು ಗದ್ದೆಯಲ್ಲೇ ಮೂರು ಸುತ್ತು ಓಡಿಸುತ್ತಾರೆ. ಬಿಳಿ ಸೀರೆ ಉಟ್ಟ ಹದಿನಾಲ್ಕು ಕುಟುಂಬದ ಮಹಿಳೆಯರು ಚೆಂಬುಚೆರ್ಕ್ ಒಪ್ಪಿಸುವ ಪದ್ಧತಿ ಇದೆ. ಇಲ್ಲಿ ಗೊಲ್ಲ ಜನಾಂಗ ಬಾಂಧವರೊಂದಿಗೆ ಗ್ರಾಮದ ಇತರ ಜನಾಂಗ ಬಾಂಧವರು ಪೂಜೆಯಲ್ಲಿ ಬಾಗಿಯಾಗುವ ಸಂಪ್ರದಾಯ ಬೆಳೆದು ಬಂದಿದೆ.

ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಧಾರೆ ಪೂಜೆ, ಪಟ್ಟಣಿ ಹಬ್ಬ, ಕತ್ತಲಾವರಿಸಿದ ನಂತರ ಆರಂಭಗೊಳ್ಳುವ ಪೂಜೆ ಬೆಳಗ್ಗಿನ ಜಾವ ಎರಡು ಗಂಟೆಯವರೆಗೆ ಜರುಗುತ್ತದೆ. ಮರುದಿನ ಜರುಗುವ ಪಟ್ಟಣಿ ಹಬ್ಬವನ್ನು ವೀಕ್ಷಿಸಲು ಅಸಂಖ್ಯಾತ ಭಕ್ತರು ಬಂದು ಊರ ಮುಂದಿನ ಅಶ್ಚತ್ಥ ವೃಕ್ಷದ ಕೆಳಗೆ ಸೇರುತ್ತಾರೆ. ಇಲ್ಲಿಗೆ ದೇವಾಲಯದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಹಿಡಿದು ನಿರ್ದಿಷ್ಟ ಜಾಗದಲ್ಲಿ ಮೂರು ಬಾರಿ ನುಡಿಸುತ್ತಾ ಊರ ಮಂದ್‍ಗೆ ಆಗಮಿಸುತ್ತಾರೆ. ನಂತರ ಊರ ಮಂದ್‍ನಲ್ಲಿ ಅಶ್ಚತ್ಥ ವೃಕ್ಷದ ಕೆಳಗೆ ಸಾಂಸ್ಕøತಿಕ ಚಟುವಟಿಕೆಗಳು ನಡೆಯುತ್ತವೆ. ಕೆಲವು ಹಿರಿಯರ ಪ್ರಕಾರ ಶ್ರೀಕೃಷ್ಣ ಇಲ್ಲಿಗೆ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಬಿಟ್ಟು ಹೋದನಂತೆ. ಆ ಕೊಳಲನ್ನು ಶ್ರೀಕೃಷ್ಣನ ನೆನಪಿನಲ್ಲಿ ಆ ಊರಿನವರು ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರಂತೆ. ಹಬ್ಬದ ದಿನ ಎತ್ತು ಪೋರಾಟ ನಡೆಯುತ್ತದೆ. ಉತ್ಸವದಂದು ಶುದ್ಧ ಮುದ್ರಿಕೆಯಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಆಕಾಶದಲ್ಲಿ ಅಪರೂಪಕ್ಕೆ ಗರುಡ ಕಾಣಿಸಿಕೊಳ್ಳುವದು ಹಬ್ಬದ ವಿಶೇಷತೆಯಾಗಿದೆ.

ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಪಟ್ಟಣಿ ಹಬ್ಬದಂದು ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಆ ದಿನ ಒಂದೊಂದು ಕುಟುಂಬದಿಂದ ಒಬ್ಬೊಬ್ಬ ಮಹಿಳೆ ಶ್ವೇತ ವಸ್ತ್ರ ಧರಿಸಿ ಹರಿವಾಣದಲ್ಲಿ ಹೂ ಅಕ್ಕಿ ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾಳೆ. ಸಂಜೆ ಹೊಳೆಯಲ್ಲಿ ಮೀನಿಗೆ ಅಕ್ಕಿ ಹಾಕುತ್ತಾರೆ. ಈ ವರ್ಷ ತಾ. 9 ರಂದು ಬೆಳಿಗ್ಗೆ ಬೆಳಗ್ಗಿನ ಹಬ್ಬ, ಪಟ್ಟಣಿ ಹಬ್ಬ ತಾ. 10 ರಂದು ಜರುಗಲಿದೆ. ಕೃಷ್ಣನ ಕೊಳಲಿನ ನಾದವನ್ನು ಆಲಿಸಬೇಕೇ, ಹಾಗಿದ್ದಲ್ಲಿ ಭಾಗವಹಿಸಿ ಉತ್ಸವಕ್ಕೆ.

- ಕುಯ್ಯಮುಡಿ ಸುನಿಲ್