ಮಡಿಕೇರಿ, ಮಾ. 7: ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲೊಂದಾದ ಭಾಗಮಂಡಲ ಭಗಂಡೇಶ್ವರ ಕ್ಷೇತ್ರದ ತ್ರಿವೇಣಿ ಸಂಗಮದ ಬಳಿ ಊಟ ಮಾಡುತ್ತಾ, ನದಿಯನ್ನು ಕಲುಷಿತಗೊಳಿಸುತ್ತಿದ್ದುದಲ್ಲದೆ, ಪ್ರಶ್ನಿಸಿದ ದೇವಾಲಯದ ಸಿಬ್ಬಂದಿಗಳ ವಿರುದ್ಧವೇ ತಿರುಗಿ ಬಿದ್ದು ಅಸಭ್ಯವಾಗಿ ವರ್ತಿಸಿದ ಪ್ರವಾಸಿಗರಿಗೆ ಪೊಲೀಸರು ದಂಡ ವಿಧಿಸಿ ಕಳುಹಿಸಿದ ಪ್ರಸಂಗ ಇಂದು ನಡೆದಿದೆ.ಬೆಂಗಳೂರಿನವರೆನ್ನಲಾದ ಶಿವರಾಜ್ ಹಾಗೂ ತಂಡದವರು ಒಟ್ಟು 20-25 ಮಂದಿ ಬಸ್‍ವೊಂದರಲ್ಲಿ ಪ್ರವಾಸ ಬಂದಿದ್ದು, ಇಂದು ಮಧ್ಯಾಹ್ನ ವೇಳೆ ಸಂಗಮದ (ಮೊದಲ ಪುಟದಿಂದ) ಬಳಿಯ ಕಟ್ಟೆಯಲ್ಲಿ ಕುಳಿತು ತಾವು ತಂದಿದ್ದ ಆಹಾರ ಸೇವನೆ ಮಾಡುತ್ತಿದ್ದರು. ಈ ಸಂದರ್ಭ ಕರ್ತವ್ಯದಲ್ಲಿದ್ದ ದೇವಾಲಯ ಸಿಬ್ಬಂದಿ ನಿಯಮಾನುಸಾರ ಇಲ್ಲಿ ಊಟ ಮಾಡುವಂತಿಲ್ಲ. ತಿಂದಿದ್ದನ್ನು ನದಿಗೆ ಹಾಕಬೇಡಿ ಎಂದು ಹೇಳಿದ್ದಾರೆ.

ಈ ಸಂದರ್ಭ ಪ್ರವಾಸಿಗರು ‘ನಾವು ಜಡ್ಜ್ ಕಡೆಯವರು, ಹೋಗಿ ಕೆಲ್ಸ ನೋಡಿ’ ಎಂದು ಬೈದು ಅಟ್ಟಿದ್ದಾರೆ. ಸಿಬ್ಬಂದಿ ಪಾರುಪತ್ತೆಗಾರ ಪೊನ್ನಣ್ಣ ಅವರ ಗಮನಕ್ಕೆ ತಂದಾಗ ಪೊನ್ನಣ್ಣ ಅವರು ಕೂಡ ಆಗಮಿಸಿ, ಅಲ್ಲಿ ಊಟ, ಇತ್ಯಾದಿ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಪ್ರವಾಸಿಗರು ಅವರನ್ನು ಕೂಡ ಲೆಕ್ಕಿಸದೆ ದರ್ಪದಿಂದ ವರ್ತಿಸಿದ್ದಾರೆ. ವಿಧಿಯಿಲ್ಲದೆ ಪೊನ್ನಣ್ಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರವಾಸಿಗರನ್ನು ಠಾಣೆಗೆ ಕರೆದೊಯ್ದು ತಿಳಿಹೇಳಿ, ಅಸಭ್ಯ ವರ್ತನೆಗಾಗಿ ದಂಡ ವಿಧಿಸಿದ್ದಾರೆ. ಮಾಡಿದ ತಪ್ಪಿಗೆ ಪ್ರವಾಸಿಗರು ದಂಡ ಪಾವತಿಸಿ ಮರಳಿದ್ದಾರೆ.