ಸೋಮವಾರಪೇಟೆ/ ಶನಿವಾರಸಂತೆ, ಮಾ.7 : ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ದಾರುಣವಾಗಿ ಅಂತ್ಯಕಂಡಿರುವ ಘಟನೆ ಸಮೀಪದ ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಹತ್ಯೆಗೈದ ಪತಿ ತಾನೂ ಸಹ ನೇಣಿಗೆ ಶರಣಾಗಿ ಜೀವನಕ್ಕೆ ಇತಿಶ್ರೀ ಹೇಳಿದ್ದು, ಪುಟಾಣಿ ಮಗು ಪೋಷಕರಿಂದ ದೂರವಾಗಿದೆ.
ಗೌಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 1 ವರ್ಷಗಳಿಂದ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅರ್ಚನಾ (30) ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ ಪತಿ ಅಂತೋಣಿ(31) ನಂತರ ತಾನೂ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈವಾಹಿಕ ಜೀವನದಲ್ಲಿನ ಮನಸ್ತಾಪದಿಂದ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಕರ್ತವ್ಯಕ್ಕೆ ಇಂದು ಹಾಜರಾಗದ ಹಿನ್ನೆಲೆ ಮಧ್ಯಾಹ್ನದ ವೇಳೆಗೆ ಆಸ್ಪತ್ರೆ ಸಿಬ್ಬಂದಿಗಳು ವಸತಿ ಗೃಹದತ್ತ ತೆರಳಿ ನೋಡಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.
ಬಾಗಿಲನ್ನು ಒಳಗಿನಿಂದ ಭದ್ರಪಡಿಸಿಕೊಂಡಿದ್ದರಿಂದ ಆಸ್ಪತ್ರೆ ಸಿಬ್ಬಂದಿಗಳು ಕಿಟಕಿಯಲ್ಲಿ ಒಳ ಇಣುಕಿ ನೋಡಿದ ಸಂದರ್ಭ ಅಂತೋಣಿ ಅವರು ನೇಣಿಗೆ ಶರಣಾಗಿರುವದು ಕಂಡುಬಂದಿದ್ದು, ಕೊಠಡಿಯ ಒಳಗೆ ಅರ್ಚನಾ ಅವರ ಮೃತದೇಹ ಗೋಚರಿಸಿದೆ. ತಕ್ಷಣ ಶನಿವಾರಸಂತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಮರಿಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರುಗಳು ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಸೋಮವಾರಪೇಟೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ನಿನ್ನೆ ರಾತ್ರಿ ಅಥವಾ ಇಂದು ಮುಂಜಾನೆ ಕೃತ್ಯ ನಡೆದಿರಬಹುದು ಎಂದು ಶಂಶಯಿಸಲಾಗಿದೆ. ದಂಪತಿಯ ಪುತ್ರ ಆರ್ಯನ್(3) ತನ್ನ ಅಜ್ಜಿಯ ಮನೆಗೆ ತೆರಳಿದ್ದ ಸಂದರ್ಭ ತಂದೆ-ತಾಯಿ ಇಹಲೋಕ ತ್ಯಜಿಸಿದ್ದಾರೆ.
ಅರ್ಚನಾ ಮತ್ತು ಅಂತೋಣಿ ಅವರುಗಳು ಕಳೆದ 6 ವರ್ಷಗಳ ಹಿಂದೆ ಪ್ರೀತಿಸಿ ಅಂತರ್‍ಜಾತಿ ವಿವಾಹವಾಗಿದ್ದರು. ಶುಶ್ರೂಷಕಿ ಯಾಗಿದ್ದ ಅರ್ಚನಾ ಆಗಾಗ್ಗೆ ಕಡಗದಾಳಿನ ತುರುಕರಹಟ್ಟಿ ಯಲ್ಲಿರುವ ತನ್ನ ತಾಯಿ ಪ್ರೇಮ (ಬಾಬಕ್ಕ) ನ ಮನೆಗೆ ಹೋಗಿ ಬರುತ್ತಿದ್ದರು. ಕಳೆದ ಒಂದು ವರ್ಷಗಳಿಂದ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಲ್ಲಿರುವ ವಸತಿಗೃಹದಲ್ಲಿಯೇ ವಾಸವಿದ್ದರು.