ಕುಶಾಲನಗರ, ಮಾ. 7: ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಏರುಪೇರಾಗು ವದರೊಂದಿಗೆ ಜನತೆ ಬವಣೆ ಪಡುವ ಪರಿಸ್ತಿತಿ ಸೃಷ್ಠಿಯಾಗಲಿದೆ.
ಕರ್ನಾಟಕ ನೀರು ಸರಬರಾಜು ಮಂಡಳಿ ಕುಶಾಲನಗರ ಸೇರಿದಂತೆ ಮುಳ್ಳುಸೋಗೆ ಗ್ರಾಮದ ಜನತೆಗೆ ಕುಡಿವ ನೀರು ಪೂರೈಸುವ ಕೆಲಸ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದು ಈ ಬಾರಿ ನದಿ ನೀರಿನ ಕೊರತೆ ಎದುರಾಗುವ ಸಂಭವ ಅಧಿಕ ಎನ್ನಬಹುದು.
ಬೈಚನಹಳ್ಳಿ ಬಳಿ ಪಂಪ್‍ಹೌಸ್ ಮೂಲಕ 60 ಹೆಚ್‍ಪಿ ಸಾಮಥ್ರ್ಯದ ಮೋಟಾರ್ ಬಳಸಿ ನೀರೆತ್ತಿ ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಅಂದಾಜು 25 ಸಾವಿರ ನಾಗರಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ವಾರಕ್ಕೆ 3 ಬಾರಿ ಕುಡಿವ ನೀರು ಒದಗಿಸಲಾಗುತ್ತಿದ್ದು ಇದೀಗ ನೀರಿನ ಕೊರತೆಯಿಂದ ಸಮಸ್ಯೆ ಬಿಗ ಡಾಯಿಸುವ ಸಾಧ್ಯತೆ ಉಂಟಾಗಲಿದೆ.
ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಕೆಯಾದ ಬೆನ್ನಲ್ಲೇ ಬೈಚನಹಳ್ಳಿ ಪಂಪ್‍ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಚೀಲಗಳ ಬಂಡ್ ನಿರ್ಮಿಸುವ ಮೂಲಕ ಪಂಪ್ ಹೌಸ್‍ಗೆ ನೀರು ಹಾಯಿಸಲು ಮಂಡಳಿ ಕ್ರಮ ಕೈಗೊಂಡಿದೆ. ಈ ಬಾರಿ ಮಾರ್ಚ್ ಪ್ರಾರಂಭದಲ್ಲಿಯೇ ನದಿಯಲ್ಲಿ ನೀರಿನ ಕೊರತೆ ಉಂಟಾಗಿದೆ ಎಂದು ಮಂಡಳಿಯ ಅಧಿಕಾರಿ ಆನಂದ್ ತಿಳಿಸಿದ್ದಾರೆ. ಕಳೆದ ಬಾರಿ ಮಾರ್ಚ್ ತಿಂಗಳಲ್ಲಿ ಮಳೆ ಸುರಿದ ಹಿನ್ನೆಲೆ ನೀರಿನ ಅಭಾವ ಎದುರಾಗಿರಲಿಲ್ಲ.
ಭವಿಷ್ಯದಲ್ಲಿ ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಜನರಿಗೆ ಬೇಸಿಗೆ ಅವಧಿಗೆ ಕುಡಿವ ನೀರು ಅಭಾವ ಸಾಧ್ಯತೆ ಇರುವ ಹಿನ್ನೆಲೆ ಹಾರಂಗಿ ಜಲಾಶಯದಿಂದ ಪಟ್ಟಣಕ್ಕೆ ನೀರು ಒದಗಿಸುವ ಯೋಜನೆಯೊಂದಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಆನಂದ್ ತಿಳಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನದಿ ತಟದಲ್ಲಿ ಹಲವೆಡೆ ಭಾರೀ ಅಶ್ವಶಕ್ತಿಯ ಮೋಟಾರ್‍ಗಳನ್ನು ಹಾಗೂ ಸ್ಪ್ರಿಂಕ್ಲರ್ ಅಳವಡಿಸುವ ಮೂಲಕ ನಿರಂತರ ವಾಗಿ ನೀರು ಹಾಯಿಸಲಾಗುತ್ತಿದೆ. ಹೆಚ್ಚಿನ ಕಡೆ ಯಾವದೇ ಅನುಮತಿಯಿಲ್ಲದೆ ಅಕ್ರಮವಾಗಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎನ್ನುವದು ಕಂದಾಯ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳು ಗಮನಹರಿಸಿ ಅಕ್ರಮ ಮೋಟಾರ್ ಪಂಪ್‍ಗಳನ್ನು ಬಳಸುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಭಾಗಮಂಡಲದಿಂದ ಕುಶಾಲನಗರ ತನಕ ವ್ಯಾಪ್ತಿಯ ನದಿಯಲ್ಲಿ ಕೆಲವೆಡೆ ಅಕ್ರಮವಾಗಿ ಬಂಡ್‍ಗಳನ್ನು ನಿರ್ಮಿಸಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ಬಗ್ಗೆಯೂ ದೂರುಗಳು ಕೇಳಿಬರುತ್ತಿವೆ. ಕುಶಾಲನಗರ ಪಟ್ಟಣಕ್ಕೆ ಕುಡಿವ ನೀರಿಗಾಗಿ 60 ಎಚ್‍ಪಿ ಸಾಮಥ್ರ್ಯದ ಮೋಟಾರ್ ಮೂಲಕ ನೀರು ಹಾಯಿಸುತ್ತಿದ್ದು, ಸಮೀಪದಲ್ಲಿ ನದಿಯಿಂದ ಪಿರಿಯಾಪಟ್ಟಣ ನಗರಕ್ಕೆ 75 ಎಚ್‍ಪಿ ಸಾಮಥ್ರ್ಯ ಎರಡು ಮೋಟಾರುಗಳ ಮೂಲಕ ನಿರಂತರವಾಗಿ ನೀರೆತ್ತಲಾಗುತ್ತಿದೆ. ಇದೇ ಸ್ಥಳದಿಂದ ಕೊಪ್ಪ, ಬೈಲುಕೊಪ್ಪ, ಮಂಚದೇವನಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರೂ. 16 ಕೋಟಿ ವೆಚ್ಚದ ಯೋಜನೆ ಯೊಂದು ಬಹುತೇಕ ಪೂರ್ಣ ಗೊಂಡಿದ್ದು ಸಧ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.
ಈ ಪಂಪ್‍ಹೌಸ್ ಬಳಿ ನದಿಯಲ್ಲಿ ಅತ್ಯಾಧುನಿಕ ಮಾದರಿಯ ಇಂಟೆಕ್ ವೆಲ್ ತೆರೆಯಲಾಗಿದ್ದು ಈ ಯೋಜನೆಗೆ ನೀರಿನ ಕೊರತೆ ಎದುರಾಗುತ್ತಿಲ್ಲ. ಕುಶಾಲನಗರ ಪಂಪ್‍ಹೌಸ್ ಬಳಿ ನೀರಿನ ಕೊರತೆ ಎದುರಾಗುವದು ಸಾಮಾನ್ಯವಾಗಿದ್ದು ಸಣ್ಣ ಗಾತ್ರದ ಚೆಕ್ ಡ್ಯಾಂ ನಿರ್ಮಿಸಿದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಒದಗಲಿದೆ ಎನ್ನುವದು ಸ್ಥಳೀಯ ರೈತರಾದ ಯಶವಂತ ಕುಮಾರ್ ಅವರ ಅಭಿಪ್ರಾಯವಾಗಿದೆ. ಇದರೊಂದಿಗೆ ಇಂಟೆಕ್ ವೆಲ್ ನಿರ್ಮಿಸಿದಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವದನ್ನು ತಪ್ಪಿಸಬಹುದು.
ವರ್ಷಂಪ್ರತಿ ನದಿಗೆ ಸಿಮೆಂಟ್ ಚೀಲಗಳಲ್ಲಿ ಮಣ್ಣು ಮರಳು ತುಂಬಿಸಿ ಬಂಡ್ ನಿರ್ಮಿಸುವದು ಮಳೆಗಾಲ ದಲ್ಲಿ ತೆರವುಗೊಳಿಸದೆ ಅದು ಸಂಪೂರ್ಣ ನದಿಯಲ್ಲಿ ಸೇರಿ ಅಪಾಯದೊಂದಿಗೆ ನದಿ ನೀರು ಕಲುಷಿತಗೊಳ್ಳುತ್ತಿರುವದನ್ನು ತಪ್ಪಿಸಬೇಕಾಗಿದೆ ಎನ್ನುವದು ಸ್ಥಳೀಯರಾದ ಶೇಖರ್ ಆಗ್ರಹವಾಗಿದೆ.
ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರು ಅಭಾವ ತಲೆದೋರುವ ಸಂಭವದ ಹಿನ್ನೆಲೆ ಪಟ್ಟಣದ ಬಡಾವಣೆಗಳಲ್ಲಿ ಲಭ್ಯವಿರುವ ಕಿರು ನೀರಾವರಿ ಯೋಜನೆಗಳನ್ನು ಸಿದ್ಧಪಡಿಸಿ ಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ 25 ಸಾವಿರಕ್ಕೂ ಅಧಿಕ ನಾಗರಿಕರಿಗೆ ದಿನನಿತ್ಯ ಅಂದಾಜು 40 ಲಕ್ಷ ಲೀಟರ್ ಪ್ರಮಾಣದ ನೀರಿನ ಅವಶ್ಯಕತೆಯಿದೆ. ಆದರೆ ಮಂಡಳಿ ಮೂಲಕ ಪ್ರಸಕ್ತ ದಿನವೊಂದಕ್ಕೆ 27 ಲಕ್ಷ ಲೀಟರ್ ಪ್ರಮಾಣದ ನೀರನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ.
ಪ್ರತಿ ನಾಗರಿಕನಿಗೆ ತಲಾ ಕನಿಷ್ಟ 135 ಲೀ. ನೀರಿನ ಅವಶ್ಯಕತೆಯಿದ್ದು, ಈ ಬಾರಿ ಕಾವೇರಿ ನದಿಯಲ್ಲಿ ನೀರಿನ ಕೊರತೆ ಎದುರಾಗಿದ್ದು ಮರಳು ಮೂಟೆಗಳನ್ನು ಹಾಕಿ ಬಂಡ್ ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದೆ. ಕುಶಾಲನಗರ ಪಟ್ಟಣ ವ್ಯಾಪ್ತಿಗೆ ಕುಡಿವ ನೀರು ಸರಬರಾಜು ಮಾಡುವ ಪಂಪ್‍ಹೌಸ್‍ಗೆ ಪರ್ಯಾಯವಾಗಿ ಮೋಟಾರ್ ಪಂಪ್ ಒಂದು ಅವಶ್ಯಕತೆಯಿರುವದಾಗಿ ಅಧಿಕಾರಿ ಆನಂದ್ ತಿಳಿಸಿದ್ದಾರೆ.
ಕಳೆದ ಬಾರಿ ಬರ ಪರಿಹಾರ ಪರಿವೀಕ್ಷಣೆಗೆ ಆಗಮಿಸಿದ ಸಚಿವರ ನಿಯೋಗ ಕುಶಾಲನಗರಕ್ಕೆ ಹೆಚ್ಚುವರಿ ಮೋಟಾರ್ ಪಂಪ್ ಒದಗಿಸುವ ಭರವಸೆ ನೀಡಿದರೂ ಅದು ಇದುವರೆಗೂ ಈಡೇರದಿರುವದನ್ನು ಇಲ್ಲಿ ಗಮನಿಸಬಹುದು.
- ಎಂ.ಎನ್. ಚಂದ್ರಮೋಹನ್