ಮಡಿಕೇರಿ, ಮಾ. 7: ಮದ್ಯದ ಅಮಲಿನಲ್ಲಿ ಮೀಸಲು ಅರಣ್ಯಕ್ಕೆ ಬೆಂಕಿಯಿಟ್ಟು ಹತ್ತಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಲು ಕಾರಣರಾದ ಕಿಡಿಗೇಡಿಗಳನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾಧಿಕಾರಿಗಳು ಈರ್ವರು ಆರೋಪಿಗಳನ್ನು ಸೆರೆ ಹಿಡಿದು ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.ಸಂಪಾಜೆ ಅರಣ್ಯ ವಲಯ ವ್ಯಾಪ್ತಿಯ ದಬ್ಬಡ್ಕ ಉಪ ವಲಯದ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಮೊನ್ನೆ ದಿನ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. 15 ರಿಂದ 20 ಎಕರೆಯಲ್ಲಿ ಅರಣ್ಯಗಳು ಆಹುತಿಯಾಗಿದೆ. ಜೀಪಿನಲ್ಲಿ ಬಂದು ಬೆಂಕಿ ಹಚ್ಚಿದ ಕುರುಹಿನ ಹಿನ್ನೆಲೆಯಲ್ಲಿ ಆರೋಪಿಗಳ ಜಾಡು ಹಿಡಿದು ಕಾರ್ಯಾಚರಣೆಗಿಳಿದ ಇಲಾಖಾಧಿಕಾರಿಗಳ

(ಮೊದಲ ಪುಟದಿಂದ) ತಂಡ ಚಹರೆ ಹಾಗೂ ಚಲನವಲನಗಳನ್ನು ಗಮನಿಸಿ ದಬ್ಬಡ್ಕ ಗ್ರಾಮದ ಉದಯಕುಮಾರ್ ಹಾಗೂ ಪ್ರಸನ್ನ ಎಂಬಿಬ್ಬರನ್ನು ಇಂದು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯದ ಅಮಲಿನಲ್ಲಿ ಆರೋಪಿಗಳು ಈ ಕೃತ್ಯವೆಸಗಿರುವದಾಗಿ ಒಪ್ಪಿಕೊಂಡಿದ್ದು, ಈರ್ವರನ್ನು ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿ, ನ್ಯಾಯಾಂಗ ವಶಕ್ಕೊಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ ಜೀಪನ್ನು ವಶಪಡಿಸಿಕೊಳ್ಳಲಾಗಿದೆ. ಅರಣ್ಯಕ್ಕೆ ಬೆಂಕಿಯಿಡುವವರಿಗೆ ಈ ಪ್ರಕರಣವೊಂದು ಎಚ್ಚರಿಕೆಯ ಗಂಟೆಯಾಗಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರೂ ಅವರ ಮಾರ್ಗದರ್ಶನದಂತೆ ಸಂಪಾಜೆ ವಲಯ ಅರಣ್ಯಾಧಿಕಾರಿ ಶಮಾ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪಿ.ಜೆ. ರಾಘವ, ವಿಜೇಂದ್ರಕುಮಾರ್ ಮತ್ತು ಸಿಬ್ಬಂದಿಗಳಾದ ಕೆ.ಪಿ. ಜೋಯಪ್ಪ, ಎಂ.ಎಸ್. ಪುನೀರ್, ಚಂದ್ರಪ್ಪ ಬಣಕಾರ್, ಡಿ. ಕಾರ್ತಿಕ್ ವಾಹನ ಚಾಲಕ ಶಿವಪ್ರಸಾದ್ ಪಾಲ್ಗೊಂಡಿದ್ದರು.